×
Ad

ಮೋದಿ ಕರ್ನಾಟಕಕ್ಕೆ ಬಂದು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ: ಸಂಸದ ಮುದ್ದಹನುಮೇಗೌಡ

Update: 2018-05-06 22:01 IST

ತುಮಕೂರು,ಮೇ.06: ಶನಿವಾರ ನಗರದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರಮೋದಿ ಪ್ರಸ್ತಾಪಿಸಿರುವ ತೆಂಗು ರಫ್ತು ಹೆಚ್ಚಳ, ಸ್ಮಾರ್ಟ್‍ಸಿಟಿ ಹಣ ಬಿಡುಗಡೆ ಸೇರಿದಂತೆ ಹಲವು ಹೇಳಿಕೆಗಳು ಸತ್ಯಕ್ಕೆ ದೂರವಾಗಿದ್ದು, ಮಾಹಿತಿ ಕೊರತೆಯಿಂದ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಶೇ 60ರಷ್ಟು ತೆಂಗು ರಫ್ತು ಹೆಚ್ಚಳವಾಗಿದೆ ಎಂದಿದ್ದಾರೆ. ವಾಸ್ತುವದಲ್ಲಿ ತೆಂಗಿನ ಬೆಲೆಯನ್ನು ಕಡಿಮೆ ಮಾಡಲು, ತೆಂಗಿನ ಎಣ್ಣೆ ಕಾರ್ಖಾನೆಗಳಿಗೆ ಅನುಕೂಲ ಮಾಡಿಕೊಡಲು, ತೆಂಗನ್ನು ಇಂಡೋನೇಷಿಯಾ, ಮಲೇಷಿಯಾ ಮತ್ತು ಶ್ರೀಲಂಕಾ ದಿಂದ ಅಮದು ಮಾಡಿಕೊಳ್ಳಲಾಗುತ್ತಿದೆ. ಇದನ್ನು ಸ್ವತಹಃ ಸರಕಾರವೇ ಒಪ್ಪಿಕೊಂಡಿದೆ. ಆದರೆ ಪ್ರಧಾನಿಯಂತಹ ದೊಡ್ಡ ಜವಾಬ್ದಾರಿ ಹುದ್ದೆಯಲ್ಲಿದ್ದುಕೊಂಡು ಕಲ್ಪತರು ನಾಡಿನ ಜನರ ಮುಂದೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು 06-02-2018 ರಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಆಡಳಿತ ಪಕ್ಷದ ಸಂಘಟಿತ ವಿಫಲತೆಯಿಂದ ಈ ವಿಚಾರ ಪ್ರಸ್ತಾಪಿಸಲು ಸಾಧ್ಯವಾಗಲಿಲ್ಲ ಎಂದು ಮುದ್ದಹನುಮೇಗೌಡ ಆರೋಪಿಸಿದರು.

ಈ ಹಿಂದೆ ತೆಂಗಿಗೆ ಕನಿಷ್ಠ 15 ಸಾವಿರ, ಅಡಿಕೆಗೆ ಕನಿಷ್ಠ 32 ಸಾವಿರ ಬೆಂಬಲ ಬೆಲೆ ನೀಡುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಕೇವಲ 480ರೂ ಮಾತ್ರ ಹೆಚ್ಚಳ ಮಾಡಿ, ರೈತರ, ಸಂಸದ ಬೇಡಿಕೆಯನ್ನು ಮನ್ನಿಸಲಿಲ್ಲ. ಆದರೆ ಕರ್ನಾಟಕಕ್ಕೆ ಬಂದು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದರು.

ಎತ್ತಿನಹೊಳೆ ಯೋಜನೆ ಕುಂಟುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಎತ್ತಿನ ಹೊಳೆ ಯೋಜನೆ ವೇಗ ಪಡೆದುಕೊಂಡಿದೆ. ಇದುವರೆಗೂ 13 ಸಾವಿರ ಕೋಟಿ ರೂ ಕಾಯ್ದಿರಿಸಿದ್ದು, ಇದರಲ್ಲಿ ಸಕಲೇಶಪುರ ಸುತ್ತಮುತ್ತ ಭೂಮಿ ಕೆಲಸ ಆರಂಭವಾಗಿದ್ದು, ಜಿಲ್ಲೆಯಲ್ಲಿ ಬಫ್ಪರ ಡ್ಯಾಂ, ನಾಲೆ ಕೆಲಸ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಸರಕಾರದ ಅಧೀನ ಸಂಸ್ಥೆಯಾದ ವಿಶ್ವೇಶ್ವರಯ್ಯ ಜಲ ನಿಗಮ ಕಾರ್ಯನಿರ್ವ ಹಿಸುತ್ತಿದೆ. ಈ ಬಗ್ಗೆ ಮೋದಿ ಅವರಿಗೆ ಸರಿಯಾದ ಮಾಹಿತಿಯಿಲ್ಲ. ಯಾರೋ ಮಾಜಿಗಳು ಬರೆದುಕೊಟ್ಟ ಸುಳ್ಳು ಭಾಷಣ ಓದಿ ಮುಜುಗರ ಪಡುವಂತಾಗಿದೆ ಎಂದು ಮುದ್ದಹನುಮೇಗೌಡ ತಿಳಿಸಿದರು.

ಹೇಮಾವತಿಯಿಂದ ಏನು ಕೆಲಸವಾಗಿಲ್ಲ ಎಂಬುದು ಮೋದಿ ಅವರ ಮತ್ತೊಂದು ಹೇಳಿಕೆ, ಆದರೆ 1970ರಲ್ಲಿ ಯೋಜನೆಯನ್ನು ಆರಂಭಿಸಿದ್ದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು. 1992ರಿಂದ ಜಿಲ್ಲೆಗೆ ನೀರು ಹರಿಯುತ್ತಿದ್ದು, ಪಾವಗಡ ಹೊರತು ಪಡಿಸಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳು ಕುಡಿಯಲು ಹೇಮಾವತಿ ನೀರಿನ ಮೇಲೆ ಆಶ್ರಯ ಪಡೆದಿವೆ. ಇದು ಜಿಲ್ಲೆಯ ಜನರಿಗೆ ಗೊತ್ತಿರುವ ವಿಷಯ. 2014ರಲ್ಲಿ ಆರಂಭವಾದ ಪುಡ್‍ಪಾರ್ಕು ಇದುವರೆಗೂ ರೈತರಿಂದ ಯಾವುದೇ ಉತ್ಪನ್ನ ಖರೀದಿಸಿಲ್ಲ. ಇಲ್ಲಿ ಕೇವಲ 12 ಜನ ಖಾಯಂ ನೌಕರರು, 80 ಜನ ಹೊರಗುತ್ತಿಗೆ ನೌಕರರಿದ್ದು ಎಲ್ಲರೂ ಗುಜರಾತ್ ಮತ್ತು ಬಿಹಾರದವರಾಗಿದ್ದು, ಕನ್ನಡಿಗರಿಗೆ ಉದ್ಯೋಗ ನೀಡಿಲ್ಲ. ಆದರೆ 6000 ಜನರಿಗೆ ಉದ್ಯೋಗ ದೊರೆತಿದೆ ಎಂದು ಹೇಳುವ ಮೂಲಕ ಸುಳ್ಳನ್ನು ನಿಜ ಮಾಡಲು ಹೊರಟಿದ್ದಾರೆ ಎಂದು ಸಂಸದರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ.ರಫೀಕ್ ಅಹಮದ್, ಮುಖಂಡ ಹೆಚ್.ಎಸ್.ಹೇಮಂತ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News