ನರೇಂದ್ರ ಮೋದಿ, ಅಮಿತ್ ಶಾ ಸುಳ್ಳಿನ ಸರದಾರರು: ಮಲ್ಲಿಕಾರ್ಜುನ ಖರ್ಗೆ
ಮಂಡ್ಯ, ಮೇ 6: ನರೇಂದ್ರಮೋದಿ ಮತ್ತು ಅಮಿತ್ ಶಾ ಸುಳ್ಳಿನ ಸರದಾರರು. ರಾಜ್ಯದಲ್ಲೆಡೆ ಬರೀ ಸುಳ್ಳು ಹೇಳಿಕೊಂಡು ಮತ ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಮಳವಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಮಂಡ್ಯದಲ್ಲಿ ಪಿ.ರವಿಕುಮಾರ್ ಗೌಡ ಪರವಾಗಿ ರವಿವಾರ ಚುನಾವಣಾ ಪ್ರಚಾರ ನಡೆಸಿ ಮಾತನಡಿದ ಅವರು, ಮೋದಿ ಮತ್ತು ಶಾ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿ ಅಧಿಕಾರಕ್ಕೆ ಬರುವ ಮೊದಲು ಪ್ರತಿ ಪ್ರಜೆಯ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವ ಭರವಸೆ ನೀಡಿದ್ದು, ಒಂದು ಪೈಸೆಯನ್ನೂ ಹಾಕಲಿಲ್ಲ. ಎರಡು ಕೋಟಿ ಉದ್ಯೋಗ ಸೃಷ್ಟಿಯನ್ನೂ ಮಾಡಲಿಲ್ಲ. ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದಾರೆ ಎಂದು ಅವರು ಟೀಕಿಸಿದರು.
ಭಯೋತ್ಪಾದನೆ, ಭ್ರಷ್ಟಾಚಾರ, ಖೋಟಾನೋಟು ಹಾವಳಿ ನಿಯಂತ್ರಣ ಹೆಸರೇಳಿ ನೋಟು ಅಮಾನ್ಯೀಕರಣಗೊಳಿ ಜನಸಾಮಾನ್ಯರಿಗೆ ತೊಂದರೆ ನೀಡಿದರು. ಇದರಿಂದ 150 ಜನ ಪ್ರಾಣ ಕಳೆದುಕೊಂಡರು ಎಂದು ಅವರು ತರಾಟೆಗೆ ತೆಗೆದುಕೊಂಡರು.
ಮಹಾದಾಯಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಒದಗಿಸಲು ಕೇಂದ್ರ ಸರಕಾರ ನಿರ್ಲಕ್ಷ್ಯವಹಿಸಿದೆ. ವರ್ಷಗಟ್ಟಲೇ ಹೋರಾಟ ನಡೆಸಿದರೂ ಜಗ್ಗುತ್ತಿಲ್ಲ. ನಿಜವಾಗಿ ಕಾಳಜಿಯಿದ್ದರೆ ಸಂಬಂಧಿಸಿದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಲು ಮುಂದಾಗಲಿ ಎಂದು ಅವರು ತಾಕೀತು ಮಾಡಿದರು.
ಆದರೆ, ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್ ಸದನದ ಒಳಗೆ, ಹೊರಗೆ ಹೋರಾಟ ನಡೆಸಿದೆ. ಈ ಹಿಂದೆ ತಮಿಳುನಾಡಿನಲ್ಲಿ ಸಮಸ್ಯೆ ಉಂಟಾಗಿದ್ದಾಗ ಅಂದಿನ ಪ್ರಧಾನಿ ಇಂದಿರಾಗಾಂಧಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕೆರೆದು ಸಮಸ್ಯೆ ಬಗೆಹರಿಸಿದ್ದರು ಎಂದು ಅವರು ಪ್ರಸ್ತಾಪಿಸಿದರು.
ಸಂವಿಧಾನ ಬದಲಿಸ ಹೊರಟರೆ ರಕ್ತಕ್ರಾಂತಿ:
ಸಂವಿಧಾನ ಬದಲಾವಣೆ ಮಾತುಗಳು ಬಿಜೆಪಿ ನಾಯಕರಿಂದ ಬರುತ್ತಲೇ ಇದ್ದು, ಇದಕ್ಕೆ ಮುಂದಾದರೆ ರಕ್ತಕ್ರಾಂತಿಯಾಗಲಿದೆ ಎಂದು ಎಚ್ಚರಿಸಿದ ಖರ್ಗೆ, ನರೇಂದ್ರಮೋದಿ ಪ್ರಧಾನಿಯಗಿರುವುದು ಅಂಬೇಡ್ಕರ್ ನೀಡಿದ ಶ್ರೇಷ್ಠ ಸಂವಿಧಾನದಿಂದ ಎಂಬುದನ್ನು ತಿಳಿಯಬೇಕೆಂದರು. ಸಂವಿಧಾನ ದಲಿತರು, ಹಿಂದುಳಿದವರು, ಮಹಿಳೆಯರು, ಸಾಮಾನ್ಯ ಜನರ ರಕ್ಷಣೆಗೆ ಹಕ್ಕು ನೀಡಿದೆ. ಇಂತಹ ಸಂವಿಧಾನವನ್ನು ಬದಲಿಸುವ ಮಾತುಗಳು ಬರುತ್ತಿದ್ದು, ದಲಿತ ಸಮುದಾಯ ಕಾಂಗ್ರೆಸ್‍ಗೆ ಮತ ನೀಡುವ ಮೂಲಕ ಸಂವಿಧಾನ ರಕ್ಷಣೆಗೆ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಅವರು ಕರೆ ನೀಡಿದರು.
ಮೋದಿ ಮತ್ತು ಬಿಜೆಪಿ ನಾಯಕರದು ಅಂಬೇಡ್ಕರ್ ಬಗೆಗಿನ ಪ್ರೀತಿ ಬರೀ ತೋರಿಕೆ ಮಾತ್ರ. ದಲಿತರು ಮತ್ತು ದಲಿತ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರಗಳನ್ನು ತಡೆಗಟ್ಟಲು ಮುಂದಾಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಮೋದಿ ಅವರಿಗೆ ದಲಿತರ ಬಗ್ಗೆ ಕನಿಷ್ಠ ಕಾಳಜಿ ಇದ್ದರೆ ನಾನು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕನಾಗುತ್ತಿದ್ದೆ. ಆದರೆ, ಕಾನೂನು ತೊಡಕು ಮುಂದೆ ಮಾಡಿ ಅದನ್ನು ತಪ್ಪಿಸಿದರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲೆಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಪ್ರಬಲವಾಗಿರುವರೋ ಅಲ್ಲಿ ಅಡ್ಡಗಾಲು ಹಾಕುವುದು ಜೆಡಿಎಸ್ ಕೆಲಸವಾಗಿದೆ ಎಂದು ವ್ಯಂಗ್ಯವಾಡಿದ ಅವರು, ನುಡಿದಂತೆ ನಡೆದು ಎಲ್ಲ ವರ್ಗದವರ ಹಿತ ಕಾದಿರುವ ಕಾಂಗ್ರೆಸ್ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಮಂಡ್ಯದಲ್ಲಿ ನಡೆದ ಪ್ರಚಾರದಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಕಾಂಗ್ರೆಸ್ ಅಭ್ಯರ್ಥಿ ಪಿ.ರವಿಕುಮಾರ್‍ಗೌಡ, ಅರವಿಂದ್, ಇತರರು ಹಾಗೂ ಮಳವಳ್ಳಿಯಲ್ಲಿ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ, ಜಿಪಂ ಸದಸ್ಯೆ ಜಯಕಾಂತ, ದಡದಪುರ ಶಿವಣ್ಣ, ಡಾ.ಮೂರ್ತಿ, ಇತರ ಮುಖಂಡರು ಹಾಜರಿದ್ದರು.