ಈ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಅಪವಿತ್ರ ಮೈತ್ರಿ: ಬಿ.ಎಸ್.ಶಿವಣ್ಣ
ಮಳವಳ್ಳಿ, ಮೇ 6: ಬಿಜೆಪಿ ಮತ್ತು ಜೆಡಿಎಸ್ ಈ ಚುನಾವಣೆಯಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದು, ಮತೀಯ ಹಾಗೂ ಜಾತಿ ಶಕ್ತಿಗಳನ್ನು ಮುಂದಿಟ್ಟುಕೊಂಡು ಜನರನ್ನು ವಂಚಿಸುತ್ತಿರುವ ಎರಡೂ ಪಕ್ಷಗಳನ್ನು ಮತದಾರರು ತಿರಸ್ಕರಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಬಿ.ಎಸ್.ಶಿವಣ್ಣ ಮನವಿ ಮಾಡಿದ್ದಾರೆ.
ತಾಲೂಕಿನ ಭೀಮನಹಳ್ಳಿ, ಕುರುಬನಪುರ, ಅಣಸಾಲೆ, ಹಳ್ಳದ ಕೊಪ್ಪಲು, ರಾಮಂದೂರು, ಮಿಕ್ಕೆರೆ, ಚನ್ನಪಿಳ್ಳೆಕೊಪ್ಪಲು ಸೇರಿದಂತೆ ಕಿರುಗಾವಲು ಹೋಬಳಿಯ ವಿವಿಧ ಗ್ರಾಮಗಳಲ್ಲಿ ರವಿವಾರ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಪರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.
ಬಡವರು ಮತ್ತು ಶ್ರೀಮಂತರ ನಡುವೆ ನಡೆಯುತ್ತಿರುವ ಮಹಾ ಚುನಾವಣೆ ಇದಾಗಿದೆ. ಇದರಲ್ಲಿ ಬಡವರ ನಾಯಕನಾಗಿ ಸಿದ್ದರಾಮಯ್ಯ ಇದ್ದರೆ ಶ್ರೀಮಂತರ ಪರವಾಗಿ ನರೇಂದ್ರ ಮೋದಿ ಇದ್ದಾರೆ. ಮೋದಿ ಒಬ್ಬ ಮಹಾನ್ ಸುಳ್ಳುಗಾರ ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿದೆ ಎಂದು ಅವರು ಟೀಕಿಸಿದರು.
ದೇವೇಗೌಡ ಮತ್ತು ಕುಮಾರಸ್ವಾಮಿ ಮಹಾನ್ ಜಾತಿವಾದಿಗಳು. ಕನಸುಗಳನ್ನು ಮಾರಾಟ ಮಾಡುತ್ತಾ ಸುಳ್ಳಿನ ಸರಮಾಲೆಯನ್ನೇ ಜನರ ಮುಂದಿಡುತ್ತಿದ್ದಾರೆ. ಇವರು ಅಧಿಕಾರದಲ್ಲಿದ್ದಾಗ ರೈತರ ಸಾಲಮನ್ನಾ ಮಾಡಲಿಲ್ಲ ಏಕೆ? ಎಂದು ಅವರು ಪ್ರಶ್ನಿಸಿದರು.
ಸಿದ್ದರಾಮಯ್ಯನವರು ನುಡಿದಂತೆ ನಡೆದಿರುವ ಸಮಾಜವಾದಿ ನಾಯಕ. ಚುನಾವಣೆ ಪೂರ್ವದಲ್ಲಿ ನೀಡಿದ 165 ಭರವಸೆಗಳಲ್ಲಿ 159 ಭರವಸೆಗಳನ್ನು ಈಡೇರಿಸಿದ್ದಾರೆ. ಜನಪರ ನಾಯಕರಾಗಿರುವ ಸಿದ್ದರಾಮಯ್ಯನವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಜಿಪಂ ಸದಸ್ಯೆ ಸುಜಾತಾ ಪುಟ್ಟು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್, ತಾಪಂ ಸದಸ್ಯ ದೊಡ್ಡಯ್ಯ, ಬಂಡೂರು ಗ್ರಾಪಂ ಅಧ್ಯಕ್ಷ ನಾಗರಾಜು, ಇತರ ಮುಖಂಡರು ಹಾಜರಿದ್ದರು.