×
Ad

ಹೊನ್ನಾವರ: ಜೆಡಿಎಸ್ ಅಭ್ಯರ್ಥಿ ಪರ ಕುಮಾರಸ್ವಾಮಿ ಚುನಾವಣಾ ಪ್ರಚಾರ ಸಭೆ

Update: 2018-05-06 22:54 IST

ಹೊನ್ನಾವರ,ಮೇ.06: ರಾಜ್ಯದಲ್ಲಿ ಜೆಡಿಎಸ್ 113 ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆ ಇದೆ. ಅದರಲ್ಲಿ ಕುಮಟಾ ಕ್ಷೇತ್ರವೂ ಒಂದು. ಎಲ್ಲರೊಂದಿಗೆ ಬೆರೆತು ಕೆಲಸ ಮಾಡುವ ಕ್ರೀಯಾಶೀಲ ಅಭ್ಯರ್ಥಿ ಪ್ರದೀಪ ನಾಯಕ ಅವರನ್ನು ಬೆಂಬಲಿಸಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಕರ್ಕಿನಾಕಾದಲ್ಲಿ ಜೆಡಿಎಸ್ ವತಿಯಿಂದ ರವಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಪಕ್ಷಕ್ಕೆ ಅಧಿಕಾರ ನೀಡಿದರೆ ಮುಖ್ಯಮಂತ್ರಿಯಾಗಿ ಜಿಲ್ಲೆಯಲ್ಲಿ 1 ತಿಂಗಳ ಕಾಲ ವಾಸ್ತವ್ಯ ಮಾಡಿ ಇಲ್ಲಿಯ ಪ್ರಮುಖ ಸಮಸ್ಯೆಯಾದ ಅರಣ್ಯ ಅತಿಕ್ರಮಣ, ಮೀನುಗಾರರ ಸಮಸ್ಯೆ, ಕುಡಿಯುವ ನೀರು ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳನ್ನು ಪರಿಹರಿಸಿ ಶಾಶ್ವತ ಪರಿಹಾರ ನೀಡಿ ಬೆಂಗಳೂರಿಗೆ ತೆರಳುತ್ತೇನೆ. ನಮ್ಮ ಜೆಡಿಎಸ್ ಸರ್ಕಾರಕ್ಕೆ ಎಲ್ಲರೂ ಆಶೀರ್ವಧಿಸಿ ಎಂದರು.

ನಮ್ಮ ಪಕ್ಷದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 65 ವರ್ಷ ಮೇಲ್ಪಟ್ಟ ಹಿರಿಯರಿಗೆ 5 ಸಾವಿರ ಗೌರವಧನ ನೀಡುತ್ತೇನೆ. ಗರ್ಭಿಣಿ ಸ್ತ್ರೀ 6 ತಿಂಗಳಿನಿಂದ 12 ತಿಂಗಳವರೆಗೆ ಪ್ರತಿ ತಿಂಗಳು 6 ಸಾವಿರ ರೂ. ನೀಡುವ ಯೋಜನೆ ಸಿದ್ದಪಡಿಸಿದ್ದೇನೆ. ವಿಧವಾ ವೇತನ ಮತ್ತು ಅಂಗವಿಕಲರಿಗೆ ಈ ಹಿಂದೆ ನೀಡಲಾಗುತ್ತಿದ್ದ ಮಾಶಾಸನ ಹೆಚ್ಚಿಸಿ ಪ್ರತಿ ತಿಂಗಳು 2000 ಗೌರವಧನ ನೀಡುವ ಮೂಲಕ ಅವರ ಬಾಳಿಗೆ ಬೆಳಕಾಗುವ ಯೋಜನೆಯ ರೂಪುರೇಷೆ ಸಿದ್ಧಪಡಿಸಲಾಗಿದೆ. ಮುಂದಿನ 5 ವರ್ಷಕ್ಕೆ ಜೆಡಿಎಸ್ ಅನ್ನು ಆಯ್ಕೆ ಮಾಡಿ. ಅಧಿಕಾರ ನೀಡಿದರೆ ಉತ್ತಮ ಆಡಳಿತದ ಜೊತೆ ನೆಮ್ಮದಿಯ ಬದುಕನ್ನು ನೀಡುತ್ತೇವೆ. ರೈತರ ಸಾಲ, ಸ್ತ್ರೀಶಕ್ತಿ ಸ್ವಸಹಾಯ ಸಂಘ ಸಾಲವನ್ನು ಮನ್ನಾ ಮಾಡುತ್ತೇನೆ. ಜೊತೆಗೆ ಮೀನುಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿ ಆರ್ಥಿಕ ಸಬಲೀಕರಣ ಮಾಡುವುದಾಗಿ ಭರವಸೆ ನೀಡಿದ ಅವರು ಜನರಿಂದ, ಜನರಿಗಾಗಿ, ಜನರಿಗೊಸ್ಕರ ಅಧಿಕಾರ ನಡೆಸುವ ಜೆಡಿಎಸ್ ಸರ್ಕಾರಕ್ಕೆ ಬೆಂಬಲಿಸಲು ಪ್ರದೀಪ ನಾಯ್ಕ ಬೆಂಬಲಿಸಿ ಎಂದು ಮನವಿ ಮಾಡಿದರು.

ಜೆಡಿಎಸ್ ಮುಖಂಡರಾದ ಬಿ.ಎಂ ಫಾರೂಕ್, ಅಭ್ಯರ್ಥಿ ಪ್ರದೀಪ ನಾಯಕ ದೇವರಬಾವಿ, ಮುಖಂಡರಾದ ಶಂಭು ಗೌಡ, ಗಣಪಯ್ಯ ಗೌಡ, ರಾಜ್ಯ ಕಾರ್ಯದರ್ಶಿ ಜಿ.ಎನ್.ಗೌಡ, ವಿಜಯಾ ಪಟಗಾರ, ಭಾಸ್ಕರ ಪಟಗಾರ, ಸುಬ್ರಾಯ ಗೌಡ, ತುಕಾರಾಮ ನಾಯ್ಕ, ಪ್ರಮುಖರು ಉಪಸ್ಥಿತರಿದ್ದರು.

ಭಟ್ಕಳದಲ್ಲಿ ಪಕ್ಷೇತರ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ: ಜೆಡಿಎಸ್ ರಾಜ್ಯಾಧ್ಯಕ್ಷ, ಎಚ್.ಡಿ.ಕುಮಾರಸ್ವಾಮಿ ಅವರು ಭಟ್ಕಳ ಕ್ಷೇತ್ರದ ರಾಜಕೀಯ ಸ್ಥಿತಿಯನ್ನು ಪ್ರಸ್ತಾಪಿಸಿ ಭಟ್ಕಳದ ಜೆಡಿಎಸ್ ಅಭ್ಯರ್ಥಿಯನ್ನು ಶಾಸಕ ಮಂಕಾಳು ವೈದ್ಯ ಬೆದರಿಸಿ ಹೈಜಾಕ್ ಮಾಡಿ ಕೀಳು ರಾಜಕೀಯ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಚುನಾವಣೆಯಲ್ಲಿ 'ಟೆಲಿಪೋನ್' ಚಿಹ್ನೆಯನ್ನು ಪಡೆದು ಪಕ್ಷೇತರರಾಗಿ ಕಣದಲ್ಲಿರುವ ಅಬ್ದುಲ್ ರೆಹಮಾನ್ ಇವರನ್ನು ಬೆಂಬಲಿಸಿ ಎಂದು ಅವರಿಗೆ ಜೆಡಿಎಸ್ ಶಾಲು ಹೊದಿಸಿ ಬೆಂಬಲ ವ್ಯಕ್ತಪಡಿಸಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News