ರಾಜ್ಯಕ್ಕೆ ಮೋದಿ, ಅಮಿತ್ ಶಾ ಬಂದ ಮೇಲೆ ಕಾಂಗ್ರೆಸ್ ಅಲೆ ಹೆಚ್ಚಾಗಿದೆ: ಸಿಎಂ ಸಿದ್ದರಾಮಯ್ಯ

Update: 2018-05-07 17:08 GMT

ಮೈಸೂರು,ಮೇ.7: ರಾಜ್ಯಕ್ಕೆ ಮೋದಿ, ಅಮಿತ್ ಶಾ ಬಂದ ಮೇಲೆ ನಮ್ಮ ಅಲೆ ಹೆಚ್ಚಾಗಿದ್ದು, ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಮತ್ತೊಮ್ಮೆ ನಾನೇ ಸಿಎಂ ಆಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಟಿ.ಕೆ.ಲೇಔಟ್‍ನಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ, ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ನಮ್ಮ ಅಲೆ ಹೆಚ್ಚಾಗಿದ್ದು, ಕಾಂಗ್ರೆಸ್ ಪಕ್ಷದ ಪರ ಮತದಾರರು ಹೆಚ್ಚಿನ ಒಲವನ್ನು ಹೊಂದಿದ್ದಾರೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಈ ಚುನಾವಣೆಯಿಂದ ನನಗೆ ಯಾವುದೇ ರೀತಿಯ ಭಯವಿಲ್ಲ. ಸೋಲುವವರು ಭಯಪಡಬೇಕು. ನಾನ್ಯಾಕೆ ಭಯಪಡಲಿ ಎಂದ ಅವರು, ಸೇನಾಧಿಪತಿ ಯುದ್ದದಲ್ಲಿ ಮುನ್ನುಗ್ಗಿದರೆ ಸೈನಿಕರು ಧೈರ್ಯದಿಂದ ಹಿಂದಿನಿಂದ ಬರುತ್ತಾರೆ ಎಂದು ಹೇಳಿದರು.

ನಮ್ಮ ಪಕ್ಷದ ಪ್ರಣಾಳಿಕೆ ಒಪ್ಪುವ ಪಕ್ಷದ ಜೊತೆ ನಾವು ಹೋಗುತ್ತೇವೆ ಎಂದು ಹೇಳಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಕಿಂಗ್ ಅನ್ನುತ್ತಿದ್ದರು. ಈಗ ಕಿಂಗ್ ಅಲ್ವಾ? ಕಿಂಗ್ ಮೇಕರ್ ಆದರೇ? ಎಂದು ವ್ಯಂಗ್ಯವಾಡಿದರು.

ಉದ್ಯಮಿಯಿಂದ ವಾಚ್ ಗಿಫ್ಟ್ ಪಡೆದಿದ್ದಾರೆ ಅನ್ನುವ ಬಿಜೆಪಿ ಆರೋಪಕ್ಕೆ ಉತ್ತರಿಸಿದ ಅವರು, ನಾನು ವಾಚ್ ಕಟ್ಟಿರೋದು ನಿಜ. ಬಿಜೆಪಿಯವರು ಫೋಟೋ ರಿಲೀಸ್ ಮಾಡಿರುವುದರಲ್ಲಿ ವಾಚ್ ಇದೆಯಾ? ಪದೇ ಪದೇ ಏಕೆ ವಾಚ್ ವಿಷಯ ಎತ್ತುತ್ತೀರಿ? ನೂರು ಸುಳ್ಳಿಗೆ ನೂರು ಉತ್ತರ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಸುದೀಪ್ ಚಾಮುಂಡೇಶ್ವರಿ ಪ್ರಚಾರಕ್ಕೆ 9 ಕ್ಕೆ ಬರುತ್ತೇನೆ ಎಂದು ಹೇಳಿದ್ದರು. ಹೀಗಾಗಿ ಅಂದಿನಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. ಬಹುಶಃ 9 ಕ್ಕೆ ಬರಬಹುದು ಎಂದು ಅಂದುಕೊಂಡಿದ್ದೇನೆ. ನಾಳೆ ಮಂಡ್ಯ ಜಿಲ್ಲೆಗೆ ಹೋಗುತ್ತೇನೆ. ಪಾಂಡವಪುರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರ ಕೂಡ ಪ್ರಚಾರ ಮಾಡುತ್ತೇನೆ. ನನಗೆ ಯಾವುದೇ ಭಯವಿಲ್ಲ. ಸೋಲುವವರು ಭಯ ಪಡುತ್ತಾರೆ. ನಾನ್ಯಾಕೆ ಭಯ ಪಡಲಿ. ನನಗೆ ಯಾವುದೇ ಅಂಜಿಕೆ ಇಲ್ಲ. ನಾವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News