×
Ad

ಬಿಜೆಪಿ ಜಾತಿ-ಜಾತಿಗಳ ನಡುವೆ ಬೆಂಕಿ ಹಚ್ಚುವ ಪಕ್ಷ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-05-07 23:48 IST

ಕೊಳ್ಳೇಗಾಲ,ಮೇ7: ಕೊಳ್ಳೇಗಾಲ ಮೀಸಲು ಕ್ಷೇತ್ರ ಕಾಂಗ್ರೇಸ್ ಅಭ್ಯರ್ಥಿ ಗೆಲ್ಲುವುದು ಸೂರ್ಯ ಪೂರ್ವದಲ್ಲಿ ಹುಟ್ಟುವಷ್ಟೆ ಸತ್ಯ. ಇವರು ಗೆಲ್ಲುವುದಲ್ಲದೇ ನಾನು ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಆಗುವುದು ಕೂಡಾ ಅಷ್ಟೆ ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಲ್ಲಿನ ನ್ಯಾಷನಲ್ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು..

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಪಕ್ಷ ಜಾತಿ- ಜಾತಿ ನಡುವೆ ಬೆಂಕಿ ಹಚ್ಚುವ ಪಕ್ಷ. ಡಾ.ಅಂಬೇಡ್ಕರ್ ಸಾಹೇಬರು ರಚಿಸಿದ ಸಂವಿದಾನ ಬದಲಿಸಲು ಹುನ್ನಾರ ನಡೆಸಿದೆ. ದಲಿತರ ಹಕ್ಕುಗಳಿಗೆ ಚ್ಯುತಿ ತರಲು ಹೊರಟಿದ್ದಾರೆ. ಆದ್ದರಿಂದ ಮತದಾರರು ಬಿ.ಜೆ.ಪಿಯನ್ನು ತಿರಸ್ಕರಿಸಬೇಕು. ಬಿ.ಎಸ್.ಪಿ ಅಭ್ಯರ್ಥಿ ಮಹೇಶ್ ಗೆದ್ದರೂ ರಾಜ್ಯ ಮಟ್ಟದಲ್ಲಿ ಏನು ಸಾಧಿಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಕ್ಷೇತ್ರದ ಜನರು ಕಾಂಗ್ರೆಸ್ ಅಭ್ಯರ್ಥಿ ಪರ ಮತಹಾಕಲು ಮನವಿ ಮಾಡಿದರು.

ಜೆಡಿಎಸ್ 25 ಸೀಟ್‍ಗೆ ಮಾತ್ರ ಸೀಮಿತ: ಜೆಡಿಎಸ್ ಗೆ ಈ ಚುನಾವಣೆಯಲ್ಲಿ 25 ಸೀಟ್ ಬರುವುದು ಕಷ್ಟ. ಬಿ.ಎಸ್.ಪಿ ಪಕ್ಷದ ಅಧ್ಯಕ್ಷೆ ಮಯಾವತಿ ಅವರ ಬಗ್ಗೆ ನನಗೆ ಗೌರವ ಇದೆ. ಆದರೇ ಕರ್ನಾಟಕದಲ್ಲಿ ಗೆಲ್ಲುವ ಶಕ್ತಿ ಇವರಿಗಿಲ್ಲ. ಹೀಗಾಗಿ ಬಿ.ಎಸ್.ಪಿಗೆ ಮತ ಹಾಕಿದರೆ ಬಿಜೆಪಿಗೆ ಅನುಕೂಲವಾಗುವುದರಿಂದ ಬಿ.ಎಸ್.ಪಿ ಅಭ್ಯರ್ಥಿ ಬದಲು ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕಿ ಕಾಂಗ್ರೆಸ್ ಭದ್ರ ಕೋಟೆಯಾಗಿರುವ ಕೊಳ್ಳೇಗಾಲ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಮತಗಳ ಹಂತರದಲ್ಲಿ ಅಭ್ಯರ್ಥಿ ಎಆರ್ ಕೃಷ್ಣ ಮೂರ್ತಿಯನ್ನು ಗೆಲ್ಲಿಸಿರಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಕೇಂದ್ರ ಮಂತ್ರಿ ಅನಂತಕುಮಾರ ಹೆಗಡೆ ಸಂವಿದಾನ ಬದಲಾಯಿಸುವ ಮಾತಿನ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ ಅವರು, ಇಂತಹ ಮಂತ್ರಿಯನ್ನು ನರೇಂದ್ರ ಮೋದಿಯವರು ಮಂತ್ರಿ ಮಂಡಲದಲ್ಲಿ ಮುಂದುವರಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. 

ಪ್ರಧಾನಿ ನರೇಂದ್ರ ಮೋದಿಯವರು ತೆರೆಮರೆಯಲ್ಲಿ ಬ್ಯಾಂಕ್ ಹಣ ಲೂಟಿ ಮಾಡಿದ ನೀರವ್ ಮೋದಿ ಹಾಗೂ ವಿಜಯ್ ಮಲ್ಯಗೆ ರಕ್ಷಣೆ ನೀಡುತ್ತಿದ್ದಾರೆ. ಕೋಟ್ಯಂತರ ಹಣ ಲೂಟಿ ಮಾಡಿದವರನ್ನು ಇನ್ನೂ ಬಂಧಿಸಲು ಆಗಿಲ್ಲ. ಇಂಥವರು ನಮ್ಮ ಸರ್ಕಾರದ ಭ್ರಷ್ಟಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ವೆಂದು ಟೀಕಿಸಿದರು

ಈ ಸಂದರ್ಭದಲ್ಲಿ ಸಂಸದ ಆರ್ ದ್ರುವನಾರಾಯಣ, ಶಾಸಕ ಜಯಣ್ಣ, ಎ.ಆರ್ ಕೃಷ್ಣಮೂರ್ತಿ, ಮಾಜಿ ಶಾಸಕ ಎಸ್.ಬಾಲ್‍ರಾಜ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮರಿಸ್ವಾಮಿ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ವಸಂತಿ ಶಿವನ್ಣ, ಮುಖಂಡರುಗಳಾದ ಕಿನಕನಹಳ್ಳಿ ರಾಚಯ್ಯ, ಡಿಎನ್ ನಟರಾಜ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಯೋಗೇಶ್, ಸದಸ್ಯ ಸದಾಶಿವ ಮೂರ್ತಿ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚೇತನ್ ದೊರೆರಾಜ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News