ದುಬಾರಿ ಶುಲ್ಕಕ್ಕೆ ಕಡಿವಾಣ ಬೀಳಲಿ

Update: 2018-05-07 18:32 GMT

ಮಾನ್ಯರೇ,

ದ್ವಿತೀಯ ಪಿಯುಸಿ ಫಲಿತಾಂಶ ಇತ್ತೀಚೆಗಷ್ಟೆ ಪ್ರಕಟಗೊಂಡಿದ್ದು, ಈ ವರ್ಷ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಸಾಧನೆ ಗೈದಿದ್ದಾರೆ. ಹಲವು ಜಿಲ್ಲೆಗಳ ಫಲಿತಾಂಶ ಕಳೆದ ವರ್ಷಕ್ಕಿಂತ ಈ ಬಾರಿ ಸಾಕಷ್ಟು ಹೆಚ್ಚಾಗಿದೆ. ಈ ಮೂಲಕ ಅನೇಕ ಜಿಲ್ಲೆಗಳ ಶೈಕ್ಷಣಿಕ ಗುಣಮಟ್ಟ ಸ್ವಲ್ಪಮಟ್ಟಿಗೆ ಪ್ರಗತಿ ಸಾಧಿಸಿದೆ ಎಂದರೆ ತಪ್ಪಾಗಲಾರದು. ಸಾಕಷ್ಟು ಬಡ ರೈತರ, ಕೂಲಿ ಕಾರ್ಮಿಕರ, ಆಟೊ ಚಾಲಕರ, ಮನೆಗೆಲಸದ, ಪೌರಕಾರ್ಮಿಕರ ಮಕ್ಕಳು ಕೆಲಸದ ಜೊತೆ ಜೊತೆಗೆ ಹಗಲು ರಾತ್ರಿ ಶ್ರಮಪಟ್ಟು ಓದಿ ಅತ್ಯುತ್ತಮ ಸಾಧನೆ ಗೈದಿದ್ದಾರೆ.
ಆದರೆ ಇಂತಹ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಗೈದಿರುವ ಸಂತಸ ಒಂದೆಡೆಯಾದರೆ, ಇನ್ನೊಂದೆಡೆ ದುಃಖ ಕಾಡುತ್ತಿದೆ. ಏಕೆಂದರೆ ತಮ್ಮ ಪದವಿ ಶಿಕ್ಷಣ ಮುಂದುವರಿಸಬೇಕಾದರೆ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳು ತೆಗೆದುಕೊಳ್ಳುವ ಲಕ್ಷಾಂತರ ರೂ. (ಡೊನೇಷನ್) ತುಂಬಲಾಗದೆ ಇರುವುದರಿಂದ ಉನ್ನತ ಶಿಕ್ಷಣ ಮುಂದುವರಿಸ ಬೇಕೋ ಅಥವಾ ಇಲ್ಲಿಗೇ ತಮ್ಮ ಶಿಕ್ಷಣವನ್ನು ನಿಲ್ಲಿಸಿ ತಮ್ಮ ಕುಟುಂಬವನ್ನು ಸಾಕಲು ದುಡಿಮೆಗೆ ತೆರಳಬೇಕೋ ಎಂಬ ಗೊಂದಲದಲ್ಲಿದ್ದಾರೆ. ರಾಜ್ಯದಲ್ಲಿ ಖಾಸಗಿ ಶಾಲಾ ಕಾಲೇಜುಗಳು ಶಿಕ್ಷಣವನ್ನು ವ್ಯಾಪಾರವನ್ನಾಗಿಸಿ, ಶಿಕ್ಷಣದ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಲಕ್ಷಾಂತರ ರೂ. ನೀಡಲಾಗದೆ ತಮ್ಮ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳು ದುಬಾರಿ ಶುಲ್ಕವನ್ನು ಕೇಳದಂತೆ ಸೂಕ್ತ ಕಾನೂನನ್ನು ಕೂಡಲೇ ರೂಪಿಸಲಿ. ಈ ಮೂಲಕ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುವಂತೆ ಸಹಕರಿಸಲಿ.

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News