ಚಿಕ್ಕಮಗಳೂರು: ಬಿಜೆಪಿಗೇ ಮತ ನೀಡುವಂತೆ ಆಣೆ ಪ್ರಮಾಣ ಮಾಡಿಸಲು ಮತದಾರರನ್ನು ಕರೆದೊಯ್ಯುತ್ತಿದ್ದ ಬಸ್‌ಗಳ ವಶ
ಚಿಕ್ಕಮಗಳೂರು, ಮೇ 8: ಬಿಜೆಪಿಗೆ ಮತ ನೀಡುವಂತೆ ಆಣೆ ಪ್ರಮಾಣ ಮಾಡಿಸಲು ಮತದಾರರನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕರೆದೊಯ್ಯುತ್ತಿದ್ದ ಎರಡು ಬಸ್‌ಗಳನ್ನು ಚುನಾವಣಾಧಿಕಾರಿಗಳನ್ನು ವಶಪಡಿಸಿಕೊಂಡಿರುವ ಘಟನೆ ಸಖರಾಯಪಟ್ಟಣದ ಕೇತಮಾರನಹಳ್ಳಿಯಲ್ಲಿ ನಡೆದಿದೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯ ಚುನಾವಣಾ ಅಭ್ಯರ್ಥಿ ಸಿ.ಟಿ.ರವಿ ಪರ ಮತ ಚಲಾಯಿಸುವಂತೆ ದೇವಳದಲ್ಲಿ ಪ್ರಮಾಣ ಮಾಡಿಸಲು ಕೇತಮಾರನಹಳ್ಳಿ ಹಾಗೂ ಗೊಲ್ಲರಹಟ್ಟಿ ಗ್ರಾಮಗಳ ಮತದಾರರನ್ನು ಈ ರೀತಿ ಬಸ್ಸಿನಲ್ಲಿ ಕರೆದೊಯ್ಯಲಾಗುತ್ತಿತ್ತು ಎಂದು ಹೇಳಲಾಗಿದೆ.
ಸಿ.ಟಿ.ರವಿ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಕೇತಮಾರನಹಳ್ಳಿ ಹಾಗೂ ಗೊಲ್ಲರಹಟ್ಟಿ ಗ್ರಾಮಸ್ಥರನ್ನು ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಆಮಿಷವೊಡ್ಡಿ ಅವರನ್ನು ಇಂದು ಮುಂಜಾವ ಮೂರು ಬಸ್‌ಗಳಲ್ಲಿ ಧರ್ಮಸ್ಥಳಕ್ಕೆ ಕರೆದೊಯ್ಯುತ್ತಿರುವ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ತುಷಾರಮಣಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಸ್ಸನನ್ನು ವಶಕ್ಕೆ ಪಡೆದು ಅದರಲ್ಲಿದ್ದ ಮತದಾರರನ್ನು ವಾಪಸ್ ಕಳುಹಿಸಿದ್ದಾರೆ.
ಇದರ ಬೆನ್ನಲ್ಲೇ ಮತದಾರರನ್ನು ಸರಕಾರಿ ಬಸ್‌ಗಳ ಮೂಲಕ ಧರ್ಮಸ್ಥಳಕ್ಕೆ ಕರೆದೊಯ್ಯುವ ಪ್ರಯತ್ನ ನಡೆದಿತ್ತು. ಈ ಬಗ್ಗೆಯೂ ಮಾಹಿತಿ ಪಡೆದ ಚುನಾವಣಾಧಿಕಾರಿಗಳು ಕೆಎಸ್ಸಾರ್ಟಿಸಿ ಬಸ್ಸನ್ನು ವಶಪಡಿಸಿಕೊಂಡು ಅದರಲ್ಲಿದ್ದ ಸುಮಾರು 50 ಮಂದಿಯನ್ನು ಮನೆಗೆ ವಾಪಸ್ ಕಳುಹಿಸಿದ್ದಾರೆ.
ಕೇತಮಾರನಹಳ್ಳಿ ಹಾಗೂ ಗೊಲ್ಲರಹಟ್ಟಿ ಗ್ರಾಮ ವ್ಯಾಪ್ತಿಯಲ್ಲಿ ವೀರಶೈವ ಹಾಗೂ ಗೊಲ್ಲ ಸಮುದಾಯದ 650ಕ್ಕೂ ಮತದಾರರಿದ್ದಾರೆ. ಈ ಪೈಕಿ ಬಹುತೇಕರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳತ್ತ ಒಲವು ತೋರುತ್ತಿರುವ ಹಿನ್ನೆಲೆಯಲ್ಲಿ ಸಿ.ಟಿ.ರವಿ ಬೆಂಬಲಿಗರು ಈ ಆಣೆ ರಾಜಕೀಯಕ್ಕೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.