ಜೆಡಿಎಸ್ ಬೆಳೆಗಾರರ ಏಳಿಗೆಗೆ ಶ್ರಮಿಸಿದ ಪಕ್ಷ: ಜೆಡಿಎಸ್ ಮುಖಂಡ ಜಗನ್ನಾಥ್
ಚಿಕ್ಕಮಗಳೂರು, ಮೇ 8: ರಾಜ್ಯದಲ್ಲಿ ಬಿಜೆಪಿ- ಕಾಂಗ್ರೆಸ್ ಸರಕಾರಗಳ ಅವಧಿಯಲ್ಲಿ ದಲಿತರಿಗೆ, ಅಲ್ಪಸಂಖ್ಯಾತರಿಗೆ, ರೈತರು ಹಾಗೂ ಕಾಫಿ ಬೆಳೆಗಾರರಿಗೆ ಯಾವುದೇ ಜನಪರ ಯೋಜನೆಗಳ ಜಾರಿಯಾಗಿಲ್ಲ. ಈ ಕಾರಣಕ್ಕೆ ರಾಜ್ಯದ ಜನತೆ ಬದಲಾವಣೆ ಬಯಸುತ್ತಿದ್ದು, ಜೆಡಿಎಸ್ ಸರಕಾರವನ್ನು ಅಧಿಕಾರಕ್ಕೆ ತರಲಿದ್ದಾರೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ, ಕಾರ್ನಾಟಕ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಬಿ.ಎ.ಜಗನ್ನಾಥ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತಾ ಪಕ್ಷ ಹಾಗೂ ಜನತಾದಳ 1983ರಿಂದಲೂ ರಾಜ್ಯ ಕಾಫಿ ಬೆಳೆಗಾರರ ಸಮಸ್ಯೆಗಳ ಪರವಾಗಿ ಧ್ವನಿ ಎತ್ತಿ ಸಾಕಷ್ಟು ಯೋಜನೆಗಳ ಜಾರಿಗೆ ಕಾರಣವಾಗಿದೆ. ಜನತಾಪಕ್ಷದ ಅಧಿಕಾರವಧಿಯಲ್ಲಿ ಜೀವಿಜಯ ಸಮಿತಿ ಸಣ್ಣ ಬೆಳೆಗಾರರ ಪರವಾಗಿ ಸರಳ ಎಕರೆವಾರು ತೆರಿಗೆಯನ್ನು ರೂಪಿಸಿದೆ. ಭೂ ಒತ್ತುವರಿ ಸಮಸ್ಯೆಯನ್ನು ಪರಿಸಹರಿಸಲು ಅಂದಿನ ಕಂದಾಯ ಸಚಿವ ಎಸ್.ಆರ್.ಬೊಮ್ಮಾಯಿ ನೇತೃತ್ವದಲ್ಲಿ ಬೊಮ್ಮಾಯಿ ಸಮಿತಿ ರಚಿಸಿದೆ. ಮಾಜಿ ಪ್ರಧಾನಿ ದೇವೇಗೌಡ ಅವರು ಸಂಸದರಾಗಿದ್ದ ಅವಧಿಯಲ್ಲಿ ಐ.ಕೆ.ಗುಜ್ರಾಲ್ ಸಮಿತಿ ಮೂಲಕ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಶಿಫಾರಸು ಮಾಡಿಸಿ ಕಾಫಿ ಬೆಳೆಗಾರರಿಗೆ ನೆರವಾಗಿದ್ದಾರೆಂದು ಅವರು ತಿಳಿಸಿದರು.
ಪ್ರಸಕ್ತ ಕಾಫಿ, ಕಾಳು ಮೆಣಸು ಧಾರಣೆ ಪಾತಾಳಕ್ಕೆ ಕುಸಿದಿದೆ. ಇದಕ್ಕೆ ಕಾರಣ ಮೋದಿ ಪರಮಾಪ್ತ ಅಮಿತ್ ಶಾ ಆಗಿದ್ದಾರೆ. ಅವರ ಮಗ ಜಯ್ ಶಾ ಹಾಗೂ ಸಂಬಂಧಿ ಶಾ ಅವರ ಕಂಪೆನಿಗಳು ವಿಯಟ್ನಾಂ ಹಾಗೂ ಶ್ರೀಲಂಕಾದಿಂದ ಕಳಪೆ ಗುಣಮಟ್ಟದ ಕಾಳು ಮೆಣಸನ್ನು ಆಮದು ಮಾಡಿಕೊಳ್ಳುತ್ತಿರುವುದೇ ಆಗಿದೆ. ಅಲ್ಲಿನ ಕಾಳು ಮೆಣಸು ರಾಸಾಯನಿಯಕಗಳಿಂದ ಕೂಡಿದ್ದು ವಿಷಯುಕ್ತ ಕಾಳು ಮೆಣಸನ್ನು ಆಮದು ಮಾಡಿಕೊಂಡು ಸ್ಥಳೀಯ ಉತ್ತಮ ಗುಣಮಟ್ಟದ ಕಾಳು ಮೆಣಸನ್ನು ಯೂರೋಪ್‍ನಂತಹ ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಇದರಿಂದಾಗಿ ಕಾಳು ಮೆಣಸಿನ ಮಾರುಕಟ್ಟೆ ಅಸ್ಥಿರಗೊಂಡಿದ್ದು, ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಕೇಂದ್ರ ಸರಕಾರ ರಾಜ್ಯದ ಬೆಳೆಗಾರ ಮನವಿಗೂ ಸ್ಪಂದಿಸಿಲ್ಲ ಎಂದು ದೂರಿದರು.
ಇನ್ನು ಕಾಫಿ ಮಂಡಳಿಯಿಂದ ಬೆಳೆಗಾರರಿಗೆ ನಯಾ ಪೈಸೆಯ ಉಪಯೋಗವಾಗುತ್ತಿಲ್ಲ. ಅದರ ಅಧ್ಯಕ್ಷರು ಬೆಳೆಗಾರರೇ ಆಗಿದ್ದರೂ ನಾಮಕಾವಸ್ಥೆ ಅಧಿಕಾರ ಅವರದ್ದಾಗಿದೆ. ರಾಜ್ಯದಲ್ಲಿ ಜೆಡಿಎಸ್ ಸರಕಾರ ಅಸ್ತಿತ್ವಕ್ಕೆ ಬಂದಲ್ಲಿ ರೈತರ ಹಾಗೂ ಬೆಳೆಗಾರರ ಸಂಪೂರ್ಣ ಸಾಲ ಮನ್ನಾವಾಗಲಿದೆ. ಹೊಸ ಕೃಷಿ ನೀತಿ ಜಾರಿಗೆ ಬರಲಿದ್ದು, ಇಸ್ರೇಲ್ ಮಾದರಿಯಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಯಾಗಲಿದೆ ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ವೀಶಶೈವ ಸಮುದಾಯವನ್ನು ಒಡೆದು ಆಳುತ್ತಿದೆ. ಆದರೆ ಜೆಡಿಎಸ್ ಪಕ್ಷ ರಾಜ್ಯದ ಎಲ್ಲ ಸಮುದಾಯಗಳ ಕಲ್ಯಾಣಕ್ಕೆ ಬದ್ಧವಾಗಿದೆ. ಚುನಾವಣೆಯಲ್ಲಿ ಎಲ್ಲ ವರ್ಗದವರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಈ ಕಾರಣಕ್ಕೆ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ರೈತರು, ದಲಿತರು, ಅಲ್ಪಸಂಖ್ಯಾತರು ಹಾಗೂ ಕಾಫಿ ಬೆಳೆಗಾರರು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹೊಲಗದ್ದೆ ಗಿರೀಶ್, ಜೆಡಿಎಸ್ ಮುಖಂಡರಾದ ಧರ್ಮರಾಜ್, ರುದ್ರಕುಮಾರ್, ಸೋಮೇಗೌಡ ಉಪಸ್ಥಿತರಿದ್ದರು.