ಕೊಳ್ಳೇಗಾಲ: ಬಿಎಸ್‍ಪಿ ಅಭ್ಯರ್ಥಿ ಎನ್.ಮಹೇಶ್ ಪರ ಮತಯಾಚನೆ
ಕೊಳ್ಳೇಗಾಲ,ಮೇ.08: ಕರ್ನಾಟಕದಲ್ಲಿ ಎಲ್ಲರಿಗೂ ಒಳ್ಳೆಯದಾಗಬೇಕಾದರೆ ಜವಾಬ್ದಾರಿಯುತವಾದ ಬಿಎಸ್‍ಪಿ ಪಕ್ಷದ ಅಭ್ಯರ್ಥಿಯಾದ ಎನ್.ಮಹೇಶ್‍ರವರಂತಹ ಬುದ್ಧಿಜೀವಿಗಳನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಿಕೊಡಬೇಕೆಂದು ಎಂದು ಹಿಂದುಳಿತ ವರ್ಗಗಳ ರಾಜ್ಯದ ಆಯೋಗದ ಮಾಜಿ ಅಧ್ಯಕ್ಷ ದ್ವಾರಕ್‍ನಾಥ್ ಅವರು ಅಭಿಪ್ರಾಯಪಟ್ಟರು.
ಮಂಗಳವಾರದಂದು ಪಟ್ಟಣದ ಬಳೇಪೇಟೆ ಬಡಾವಣೆಯಲ್ಲಿ ಬಿಎಸ್‍ಪಿ ಪಕ್ಷದ ಅಭ್ಯರ್ಥಿ ಎನ್.ಮಹೇಶ್‍ರವರ ಪರವಾಗಿ ಮನೆ ಮನೆ ಮತಯಾಚನೆ ಮಾಡಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಹೇಶ್‍ರವರು ಕೊಳ್ಳೇಗಾಲ ಕ್ಷೇತ್ರದಲ್ಲಿ ಗೆದ್ದರೆ ಕರ್ನಾಟಕದ ಚಿತ್ರಣವೇ ಬದಲಾಗುತ್ತದೆ. ಬುದ್ಧಿ ಜೀವಿ ಸಾಮಾಜಿಕ ಭದ್ರತೆಯುಳ್ಳ ವ್ಯಕ್ತಿಗಳು ಶಾಸನ ಸಭೆಯಲ್ಲಿ ಇದ್ದರೆ ರಾಜ್ಯದ ಗಂಭೀರ ವಿಷಯಗಳು ಅಲ್ಲಿ ಚರ್ಚೆಯಾಗುತ್ತದೆ. ಇದರಿಂದ ರಾಜ್ಯದ ಜನತೆಗೆ ಒಳಿತಾಗುವುದಲ್ಲದೆ ಸದನಕ್ಕೆ ಗೌರವ ಸಿಗುತ್ತದೆ. ಅದಕ್ಕೆ ಈ ಕ್ಷೇತ್ರದ ಮತದಾರರ ಪ್ರಭುಗಳು ಎಚ್ಚೆತ್ತುಗೊಂಡು ಜನಮೆಚ್ಚುವ ಹೊಣೆಗಾರಿಕೆಯನ್ನು ಅರ್ಥಮಾಡಿಕೊಳ್ಳುವಂತಹ, ಬಡವರು ದಮನಿತರಿಗೆ ಒಳಿತು ಮಾಡುವ ಹಾಗೂ ಪ್ರಜಾಪ್ರಭುತ್ವದ ಮೌಲ್ಯ ಉಳಿಸಬೇಕಾದಂತಹ ಎನ್.ಮಹೇಶ್‍ರವರಂತಹವರನ್ನುಗೆಲ್ಲಿಸಬೇಕು. ಈ ಗೆಲುವು ಪ್ರಜಾಪ್ರಭುತ್ವ ಮೌಲ್ಯದ ಗೆಲುವು ಆಗುತ್ತದೆ ಹಾಗೂ ಜನರಿಗೆ ಸಾಮಾಜಿಕ ನ್ಯಾಯ ದೊರಕುತ್ತದೆ.ಇದನ್ನೆಲ್ಲಾ ಅರ್ಥ ಮಾಡಿಕೊಂಡು ಕೊಳ್ಳೇಗಾಲದ ಜನತೆ ಈ ಬಾರಿ ಮಹೇಶ್‍ರವರ ಆನೆ ಗುರುತಿನ ಚಿಹ್ನೆ ಇರುವ ಬಟನ್ ಒತ್ತುವ ಮೂಲಕ ಮತ ನೀಡಬೇಕೆಂದು ಮನವಿ ಮಾಡಿದರು.
ಕಳೆದ 40, 50 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಮತ್ತು ಬಿಜೆಪಿ ಸರ್ಕಾರವು ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸದನಕ್ಕೆ ಅಗೌರವ ತರುವಂತಹ ಚಟುವಟಿಕೆ ಮತ್ತು ಕೃತ್ಯಗಳಲ್ಲಿ ತೊಡಗಿ ಶಾಸಕರ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಕಳಕಳಿಯುಳ್ಳ ಬುದ್ಧಿಜೀವಿಗಳು ಶಾಸಕರಾದರೆ ಇಂತಹವರು ತಲೆ ತಗ್ಗಿಸಬೇಕಾಗುತ್ತದೆ ಎಂದು ಹೇಳಿದರು.
ಈ ಮತಯಾಚನೆಯಲ್ಲಿ ನಗರಸಭಾ ಸದಸ್ಯರಾದ ಕೃಷ್ಣಯ್ಯ, ಉದಯಕುಮಾರ್, ಅಜ್ಜಿಕ್, ವೇಕಟಚಾಲ, ಸೋಮಣ್ಣ, ಕೀಟಿ, ವಿಜಯ, ಕರಾಟೆಸಿದ್ದರಾಜು, ಬವಸರಾಜು, ಮಹದೇವ್, ಲೋಕಿ, ಸುದಾಶಿವುಮಲ್ಲು, ಹಾಗೂ ಇತರರು ಇದ್ದರು.