ಚಿಕ್ಕಮಗಳೂರು: ಮತದಾರರನ್ನು ಸೆಳೆಯಲು, ಕಳೆಯಲು ರಾಜಕೀಯ ಪಕ್ಷಗಳಿಂದ ವಿಧವಿಧ ತಂತ್ರ !
ಚಿಕ್ಕಮಗಳೂರು, ಮೇ 8: ಅಂಚೆ ಮತ ಚಲಾಯಿಸುವ ಸರಕಾರಿ ನೌಕರರ ಗುರುತಿನ ಪತ್ರ ಮತ್ತು ಬ್ಯಾಲೆಟ್ ನೀಡಿದರೆ 1000 ರೂಪಾಯಿ, ಮತ ಚಲಾಯಿಸಲು ಮತಗಟ್ಟೆಗೆ ಬಾರದಿರಲು ಒಪ್ಪಿಗೆ ನೀಡಿ ಗುರುತಿನ ಪತ್ರ ನೀಡಿದ ಮುಸ್ಲಿಂ ಮತದಾರರಿಗೆ ಮತವೊಂದಕ್ಕೆ 4000, ಯಾವ ಪಕ್ಷಕ್ಕೂ ಮತ ಚಲಾಯಿಸದೇ ಕ್ಷೇತ್ರವನ್ನೇ ಬಿಟ್ಟು ಲಕ್ಷ್ಮೇಶ್ವರ, ಅಜ್ಮೀರ್ ದರ್ಗಾಗೆ ಭೇಟಿ ನೀಡಲು ಅಪೇಕ್ಷಿಸುವ ಮುಸ್ಲಿಂ ಮತದಾರರಿಗೆ ಐಷಾರಾಮಿ ಬಸ್‍ನಲ್ಲಿ ಟೂರ್ ಪ್ಯಾಕೇಜ್, ಪ್ರತೀ ಬೂತ್‍ನಲ್ಲಿ ಕಾರ್ಯನಿರ್ವಹಿಸುವ ಬೂತ್ ಮಟ್ಟದ ಮುಖಂಡರಿಗೆ 50 ಸಾವಿರ ನಗದು, ಮತ ಚಲಾಯಿಸಲು ಬರುವ ಮತದಾರರನ್ನು ಪಿಕಪ್, ಡ್ರಾಪ್ ಮಾಡಲು ವಾಹನ ಸೌಲಭ್ಯ ಇವೆಲ್ಲವೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ನಡೆಸುತ್ತಿರುವ ತಂತ್ರಗಳು.
ಚುನಾವಣಾ ಕರ್ತವ್ಯ ನಿರ್ವಹಿಸಲು ತೆರಳಲಿರುವ ಸರ್ಕಾರಿ ನೌಕರರು ಮತದಾನ ಮಾಡಲು ಅವಕಾಶ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸರ್ಕಾರಿ ನೌಕರರಿಗೆ ಮತ ಚಲಾಯಿಸಲು ಮತಪತ್ರಗಳನ್ನು ನೀಡಿದ್ದು, ಸರ್ಕಾರಿ ನೌಕರರ ಮತಗಳ ಮೇಲೆ ಕಣ್ಣಿಟ್ಟಿರುವ ಕೆಲವು ರಾಜಕೀಯ ಪಕ್ಷಗಳು ಮತಪತ್ರ ಮತ್ತು ಗುರುತಿನಪತ್ರ ನೀಡಿದರೆ ಪ್ರತಿ ಮತವೊಂದಕ್ಕೆ 1000 ರೂಪಾಯಿ ನೀಡುವ ಭರ್ಜರಿ ಆಫರ್ ನೀಡಿದೆ. ಕೆಲವು ಸರಕಾರಿ ನೌಕರರು ಊರಿಗೆಲ್ಲ ಬುದ್ದಿಹೇಳಿ ತಾವೇ ಹಣಕ್ಕಾಗಿ ಮತಪತ್ರ ಮತ್ತು ಗುರುತಿನ ಚೀಟಿಯನ್ನು ಮಾರಾಟ ಮಾಡಿರುವುದು ಸಹ ಗುಟ್ಟಾಗಿ ಉಳಿದಿಲ್ಲ.
ತಮಗೆ ಮತ ಬರದಿದ್ದರೂ ಪರವಾಗಿಲ್ಲ, ವಿರೋಧ ಪಕ್ಷಕ್ಕೆ ಬರುವ ಮತಗಳನ್ನು ತಡೆಯಲು ಮುಸ್ಲಿಂ ಮತದಾರರನ್ನು ಹೇಗಾದರೂ ಮಾಡಿ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ಬಡ ಮುಸ್ಲಿಮರು ವಾಸಿಸುವ ಟಿಪ್ಪುನಗರ, ಕಲ್ದೊಡ್ಡಿ, ಲೆಂಡಿತಲಾಬ್, ಶ್ರೀಲೇಖಚಿತ್ರಮಂದಿರದ ಆಸುಪಾಸುಗಳ ಬಡಾವಣೆ ಹಾಗೂ ನಾರಾಯಣಪುರದ ಮುಸ್ಲಿಮರಿಂದ ಮತ ಪತ್ರಗಳನ್ನು ಪಡೆದು ಪ್ರತಿ ಮತವೊಂದಕ್ಕೆ 4000 ರೂಪಾಯಿಗಳನ್ನು ನೀಡಲಾಗುತ್ತಿದೆ. ಮುಸ್ಲಿಮರ ಮನೆ ಮನೆಗಳಿಗೆ ಭೇಟಿ ನೀಡಿ ಗುರುತಿನ ಚೀಟಿಗಳನ್ನು ಖರೀದಿಸಲೆಂದೇ ಮಧ್ಯವರ್ತಿಗಳನ್ನು ನೇಮಿಸಲಾಗಿದೆ ಎಂಬ ಮಾತೂ ಕೇಳಿ ಬಂದಿದ್ದು, ಈ ಸಂಬಂಧ ವೀಡಿಯೋಗಳು ವೈರಲ್ ಆಗುತ್ತಿದೆ. ಇಂತಹ ಮಧ್ಯವರ್ತಿಗಳಿಗೆ ಪ್ರತೀ ಗುರುತಿನ ಚೀಟಿ ಖರೀದಿಗೆ ಕಮೀಷನ್ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಮುಸ್ಲಿಂ ಮತದಾರರನ್ನು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿಯುವಂತೆ ಮಾಡಲು ಮುಸ್ಲಿಮರ ಶ್ರದ್ಧಾ ಕೇಂದ್ರವಾದ ಲಕ್ಷ್ಮೇಶ್ವರದ ದೂಧ್ ದರ್ಗಾಕ್ಕೆ ಐಷಾರಾಮಿ ಬಸ್‍ನಲ್ಲಿಯೂ, ಅಜ್ಮೀರ್ ದರ್ಗಾಕ್ಕೆ ಫಸ್ಟ್ ಕ್ಲಾಸ್ ರೈಲಿನ ಟಿಕೆಟ್ ಖರೀದಿಸಿ ಕಳುಹಿಸುವ ಸ್ಕೀಂ ಈಗಾಗಲೇ ಆರಂಭಗೊಂಡಿದೆ. ಬೂತ್ ಮಟ್ಟದ ಕಾರ್ಯಕರ್ತರಿಗೆ ತಲಾ 50 ಸಾವಿರ ರೂಪಾಯಿಗಳ ಪ್ಯಾಕೇಜ್ ಘೋಷಿಸಲಾಗಿದ್ದು, ಬಡಾವಣೆವಾರು ಹಣ ಹಂಚಿಕೆಗೆ ಅನುಕೂಲವಾಗುವಂತೆ ರಾತ್ರಿ 8 ರಿಂದ 9 ರವರೆಗೆ ಬೀದಿದೀಪಕ್ಕೆ ವಿದ್ಯುತ್ ಕಡಿತಗೊಳಿಸುವ ಯೋಜನೆಯು ರೂಪುಗೊಂಡಿರುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ವಿಶೇಷವೆಂದರೆ ಈ ಎಲ್ಲಾ ಪ್ಯಾಕೇಜ್‍ಗಳನ್ನು ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಪ್ರಾಯೋಜಕತ್ವದಲ್ಲಿಯೇ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.