ಕೋಮುವಾದ ಬೆಳೆಸಿದ ಬಿಜೆಪಿ ಕೈಯಲ್ಲಿ ರಾಜ್ಯವನ್ನು ಕೊಡಬೇಡಿ: ಪ್ರಕಾಶ್ ರೈ
ಮೈಸೂರು,ಮೇ.8: ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ, ನೆಮ್ಮದಿಯಾಗಿ ಆಡಳಿತ ನಡೆಸಲು ಬಿಡದೆ ಅವರ ಪರವಾಗಿ ರೆಡ್ಡಿ ಬ್ರದರ್ಸ್ ಅಧಿಕಾರದ ಚುಕ್ಕಾಣಿ ಹಿಡಿಯುವರು ಎಂದು ಜಸ್ಟ್ ಆಸ್ಕಿಂಗ್ ನ ರೂವಾರಿ, ಬಹುಭಾಷಾ ನಟ ಪ್ರಕಾಶ್ ರೈ ಆತಂಕ ವ್ಯಕ್ತಪಡಿಸಿರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲಿಗೆ ತುದಿಯಲ್ಲಿಯೇ ಕೋಮುವಾದ ಬೆಳೆಸಿದ ಬಿಜೆಪಿ ಕೈಯಲ್ಲಿ ರಾಜ್ಯ ಕೊಡಬೇಡಿ. ಬಿಜೆಪಿಯೊಂದಿಗೆ ಸಾಂಗತ್ಯ ಬೆಳೆಸುವುದಿಲ್ಲವೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆಯೇ ಹೊರತು, ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಸಿಎಂ ಕುಮಾರಸ್ವಾಮಿ ಎಲ್ಲಿಯೂ ಸ್ಪಷ್ಟವಾಗಿ ಘೋಷಿಸಿಲ್ಲ. ಈಗಾಗಲೇ ಸಮ್ಮಿಶ್ರ ಸರ್ಕಾರವನ್ನು ಒಮ್ಮೆ ನೋಡಿದ್ದೇವೆ. ಮತ್ತೆ ಸಂಗೀತ ಕುರ್ಚಿ ರೀತಿಯ ಸರ್ಕಾರ ರಾಜ್ಯಕ್ಕೆ ಬೇಕಿಲ್ಲ. ಕಳೆದ ನಾಲ್ಕು ವರ್ಷದಿಂದ ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶದಲ್ಲಿ ನಡೆದ ಆಳ್ವಿಕೆಯಲ್ಲಿ ಮಹಿಳೆಯರು ಸೇರಿದಂತೆ ಯಾರಿಗೂ ರಕ್ಷಣೆ ಇಲ್ಲದಾಗಿದೆ ಎಂದರು.
ನಾನು ಬಿಜೆಪಿ ವಿರೋಧಿ. ಆದರೆ ಯಾವ ಪಕ್ಷದ ಪರವಾಗಿಯೂ ಇಲ್ಲ. ಅಭಿವೃದ್ಧಿಯ ಮಾತು ಬಿಟ್ಟು ಕೇವಲ ಅವಾಚ್ಯ ಪದಗಳಲ್ಲಿ ವೈಯುಕ್ತಿಕ ನಿಂದನೆಗೆ ಇಳಿದಿರುವ ಮೋದಿಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಿದೆ. ಏಕಧರ್ಮೋಪಾಸನೆ ದೇಶಕ್ಕೆ ಒಳ್ಳೆಯದಲ್ಲ, ಪಾಕಿಸ್ತಾನದಿಂದ ಈ ಬಗ್ಗೆ ಪಾಠ ಕಲಿಯಬೇಕು ಎಂದು ತಿಳಿಸಿದರು.
ನನಗೆ ಯಾರ ಭಯವೂ ಇಲ್ಲ. ನನ್ನ ತಪ್ಪಿನಿಂದ ನಾನು ಆಧೋಗತಿಗೆ ಇಳಿಯಬಹುದೇ ಹೊರತು ನನಗೆ ಯಾರು ಏನು ಮಾಡಲಾಗುವುದಿಲ್ಲ. ಹೆಚ್ಚೆಂದರೆ ನನ್ನ ಕೊಲ್ಲಬಹುದೇ ಹೊರತು ಇನ್ನೇನು ಮಾಡಲು ಸಾಧ್ಯವಿಲ್ಲವೆಂದು ಹೇಳಿದರು.
ತೃತೀಯ ರಂಗ ಬರಬೇಕು. ಬದಲಾವಣೆ ಸಹಜವಾಗಿ ನಡೆಯುತ್ತದೆ. ಆದರೆ ಪ್ರಶ್ನಿಸದಿದ್ದರೆ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ .ಸುಮ್ಮನೆ ಇದ್ದರೆ ದೇಶಕ್ಕೆ ಗಂಡಾಂತರ ಎದುರಾಗುವುದು ಎಂದರು.
ಮುಖ್ಯಮಂತ್ರಿ ಅನಿಸಿಕೊಳ್ಳುವವರಿಗೆ ಜಾತಿ, ಮತ, ಧರ್ಮ ಬೇದ ಇರಬಾರದು. ಯೋಗ್ಯರು, ಅರ್ಹರು, ಕೆಲಸ ಮಾಡುವವರು ಸಿಎಂ ಆಗಬೇಕು ಎನ್ನುವುದೇ ನನ್ನ ಅಭಿಪ್ರಾಯ. ನಿಮ್ಮ ಮತ ಬಿಜೆಪಿಗೆ ಬಿಟ್ಟು ಯಾರಿಗಾದರೂ ಹಾಕಿ ಎಂದು ಮನವಿ ಮಾಡಿದರು.