×
Ad

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನದ ಆಶಯಗಳಿಗೆ ಪೆಟ್ಟು: ಜಿಗ್ನೇಶ್ ಮೇವಾನಿ

Update: 2018-05-08 22:05 IST

ಮೈಸೂರು,ಮೇ.8: ಕರ್ನಾಟಕದ ವಿಧಾನಸಭೆ ಚುನಾವಣೆ ದೇಶದ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಇದು 2019ರ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿಕ್ಸೂಚಿ. ಹಾಗಾಗಿ ಸಂವಿಧಾನ ವಿರೋಧಿ, ಕೋಮುವಾದಿ ಶಕ್ತಿಗಳನ್ನು ಬಗ್ಗು ಬಡಿಯುವ ಸಂದರ್ಭ ಈಗ ಬಂದಿದೆ ಎಂದು ಗುಜರಾತ್‍ನ ಶಾಸಕ ಜಿಗ್ನೇಶ್ ಮೇವಾನಿ ಹೇಳಿದರು.

ನಗರದ ದೇವರಾಜ ಮೊಹಲ್ಲಾದ ದಿವಾನ್ಸ್ ರಸ್ತೆಯಲ್ಲಿರುವ ಕುಂಚಿಟಿಗರ ಸಂಘದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಂವಿಧಾನ ಉಳಿಸಿ” ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಸ್ವಯಂಬಲದ ಮೇಲೆ ಅಧಿಕಾರ ನಡೆಸುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನಮ್ಮ ವಿಚಾರಧಾರೆಗಳು ಹಾಗೂ ಸಂವಿಧಾನದ ಆಶಯಗಳಿಗೆ ಸಾಕಷ್ಟು ಪೆಟ್ಟು ಬೀಳಲಿದೆ ಎಂದರು.

ಕಳೆದ 78 ದಿನಗಳಿಂದ 28 ಜಿಲ್ಲೆಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಉಳಿವಿಗಾಗಿ ಸಾಕಷ್ಟು ಸಮಾವೇಶಗಳನ್ನು ಆಯೋಜಿಸಿದ್ದು, ಸಂವಿಧಾನ ಉಳಿಯಬೇಕಾದರೆ ಬಿಜೆಪಿಯನ್ನು ಕರ್ನಾಟಕದಲ್ಲಿ ಸೋಲಿಸುವುದು ಅನಿವಾರ್ಯ. ಆದರೆ, ಕೇಂದ್ರ ಸಚಿವ ಅನಂತ್‍ ಕುಮಾರ್ ಹೆಗಡೆ ಸೇರಿದಂತೆ ಆರೆಸ್ಸೆಸ್ ಮುಖಂಡರು ನಿರಂತರ ಸಂವಿಧಾನ ಬದಲಾವಣೆಗಾಗಿ ಆಗ್ರಹಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ದಲಿತರ ಏಳಿಗೆ ಬಗ್ಗೆ ಸಾರ್ವಜನಿಕ ಸಭೆ ಸಮಾರಂಭದಲ್ಲಿ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ, ಅವರ ಏಳಿಗೆಗಾಗಿ ನೂತನ ಯೋಜನೆಗಳನ್ನು ಪ್ರಕಟಿಸಿಲ್ಲ. ಅಲ್ಲದೆ, ವಿಜಯ್‍ಮಲ್ಯ, ನೀರವ್ ಮೋದಿ ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ವಂಚಿಸಿ ವಿದೇಶಕ್ಕೆ ಹಾರಿದಾಗ ದೇಶದ ಚೌಕಿದಾರ ಎಂದು ಹೇಳಿಕೊಳ್ಳುವ ಪ್ರಧಾನಿ ಮೋದಿ ಏನು ಮಾಡುತ್ತಿದ್ದರು ಎಂದು ಜಿಗ್ನೇಶ್ ಮೇವಾನಿ ಪ್ರಶ್ನಿಸಿದರು.

ಸಮಾಜವನ್ನು ಮತಧರ್ಮಗಳ ಆಧಾರದಲ್ಲಿ ಒಡೆದು ಅಧಿಕಾರ ಹಿಡಿಯುವುದು ಬಿಜೆಪಿಯ ಅಜೆಂಡಾ. ಕರ್ನಾಟಕದಲ್ಲಿ ಬಸವಣ್ಣ, ನಾರಾಯಣಗುರು, ಸೂಫಿ ಸಂತರ ಚಳುವಳಿಯಿಂದ ಈ ನೆಲ ತನ್ನದೇ ಆದ ಅಸ್ಮಿತೆ, ಸಂಸ್ಕೃತಿ ಹೊಂದಿದೆ. ಶಾಂತಿ ಮತ್ತು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಕರ್ನಾಟಕದ ಪ್ರಜ್ಞಾವಂತ ಮತದಾರರು, ಪ್ರಧಾನಿ ಮೋದಿ ಅವರ ಕುತಂತ್ರ ಮಾತಿನ ಮೋಡಿಗೆ ಬಲಿಯಾಗಬಾರದು ಎಂದು ಹೇಳಿದರು.

ನಮ್ಮ ಹೋರಾಟವನ್ನು ಕಾಂಗ್ರೆಸ್ ಮಾತ್ರ ಬೆಂಬಲಿಸುತ್ತಿದೆ: ಬಹುಭಾಷಾ ನಟ ಪ್ರಕಾಶ್ ರೈ ಮಾತನಾಡಿ, ರಾಜ್ಯಾದಂತ್ಯ 78 ದಿನಗಳಿಂದ ನಡೆಸುತ್ತಿರುವ 'ಸಂವಿಧಾನ ಉಳಿಸಿ' ಹೋರಾಟವನ್ನು ಕಾಂಗ್ರೆಸ್ ಪಕ್ಷ ಮಾತ್ರ ಬೆಂಬಲಿಸುತ್ತಿದೆ. ಆದರೆ, ಬಿಜೆಪಿ, ಜೆಡಿಎಸ್ ನಮ್ಮ ಹೋರಾಟವನ್ನು ಬೆಂಬಲಿಸಿಲ್ಲ. ಆದ್ದರಿಂದ ಈ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ರಚನೆಯಾಗದಂತೆ ಮತದಾರರ ನೋಡಿಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ಪ್ರಗತಿಪರ ಚಿಂತಕ ಪ.ಮಲ್ಲೇಶ್, ಎ.ಕೆ.ಸುಬ್ಬಯ್ಯ, ನೂರ್ ಶ್ರೀಧರ್, ಮುನವರ್ ಸಾಬ್, ಅಶೋಕ್, ಕೆ.ಆರ್.ಗೋಪಾಲಕೃಷ್ಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News