ಜೆಡಿಎಸ್‍ನಿಂದ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಸಾಧ್ಯವಿಲ್ಲ: ಅಮಿತ್ ಶಾ

Update: 2018-05-09 12:15 GMT

ತುಮಕೂರು,ಮೇ.09: ಜೆಡಿಎಸ್ ಪಕ್ಷದಿಂದ ರಾಜ್ಯವನ್ನಾಳ್ಳುತ್ತಿರುವ ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಲು ಸಾಧ್ಯವಿಲ್ಲ. ಆದ್ದರಿಂದ ರಾಜ್ಯದ ಮತದಾರರು, ಕರ್ನಾಟಕದ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಬಿಜೆಪಿಗೆ ಮತ ನೀಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮನವಿ ಮಾಡಿದ್ದಾರೆ.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬೂರು ಗ್ರಾಮದ ಗಣೇಶ್ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಕರ್ನಾಟಕದ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಕ್ಕೆ 117 ಹೊಸ ಕಾರ್ಯಕ್ರಮಗಳನ್ನು ನೀಡಿರುವ ಬಿಜೆಪಿಯೇ ಕಾಂಗ್ರೆಸ್ ಅರ್ಭಟವನ್ನು ಕಡಿಮೆ ಮಾಡಲು ಇರುವ ಏಕೈಕ ಮಾರ್ಗ ಎಂದರು.

ಯುದ್ದದಿಂದ ವೈರಿಗೆ ಎದೆಕೊಟ್ಟು ನಿಲ್ಲದೆ ಪಲಾಯನ ಮಾಡುವ ವ್ಯಕ್ತಿಗಳಿಂದ ಯುದ್ದವನ್ನು ಗೆಲ್ಲಲ್ಲು ಸಾಧ್ಯವೇ? ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋಲುವುದು ಖಚಿತವಾದ ನಂತರ ಬಾದಾಮಿಗೆ ಓಡಿ ಹೋಗಿದ್ದಾರೆ. ಅಲ್ಲಿಯೂ ಅವರನ್ನು ಶ್ರೀರಾಮಲು ಸೋಲಿಸಲಿದ್ದಾರೆ. ಹಣ ಹಂಚಿ ಚುನಾವಣೆ ಗೆಲ್ಲಲು ಸಿದ್ದರಾಮಯ್ಯ ವಾಮಮಾರ್ಗ ಅನುಸರಿಸುತ್ತಿದ್ದು, ಅದು ಎಂದಿಗೂ ಸಾಧ್ಯವಾಗುವುದಿಲ್ಲ. ಅವರು ಚುನಾವಣೆಯಲ್ಲಿ ಗೆಲ್ಲಲು ವಾಮಮಾರ್ಗ ಹಿಡಿದಿರುವುದಕ್ಕೆ ಬಾದಾಮಿಯ ರೆಸಾರ್ಟ್‍ನಲ್ಲಿ ಸಿಕ್ಕಿರುವ ಹಣ ಮತ್ತು ಬೆಂಗಳೂರಿನ ಮನೆಯೊಂದರಲ್ಲಿ ಪತ್ತೆಯಾಗಿರುವ 10 ಸಾವಿರಕ್ಕೂ ಹೆಚ್ಚು ನಕಲಿ ಮತದಾರರ ಗುರುತಿನ ಚೀಟಿ ಸಾಕ್ಷಿ ಎಂದು ಅಮಿತ್ ಶಾ ನುಡಿದರು.

ನಾನು ಸಮಾಜವಾದಿ ಎಂದು ಹೇಳುವ ಸಿದ್ದರಾಮಯ್ಯ ಬಳಿ 40 ಲಕ್ಷ ರೂ ಬೆಲೆ ಬಾಳುವ ವಾಚ್ ಇದೆ. ಅದನ್ನು ದುಬೈನ ಸ್ನೇಹಿತರೊಬ್ಬರು ಗಿಫ್ಟ್ ನೀಡಿದ್ದು ಎಂದು ಹೇಳುತ್ತಿದ್ದಾರೆ. ಆ ಸ್ನೇಹಿತ ಯಾವ ಉಪಕಾರಕ್ಕಾಗಿ ವಾಚನ್ನು ಉಡುಗೊರೆಯಾಗಿ ನೀಡಿದರು ಎಂಬುದನ್ನು ಇದುವರೆಗೂ ಸಿದ್ದರಾಮಯ್ಯ ಬಹಿರಂಗಪಡಿಸಿಲ್ಲ. ಇಷ್ಟು ಬೆಲೆ ಬಾಳುವ ವಾಚ್ ಇರುವ ಬಗ್ಗೆ ಚುನಾವಣಾ ಆಯೋಗಕ್ಕೆ ಆಸ್ತಿ ಘೋಷಣೆ ಸಂದರ್ಭದಲ್ಲಿ ತಿಳಿಸಿಲ್ಲ. ಈ ಕುರಿತ ನನ್ನ ಪ್ರಶ್ನೆಗಳಿಗೆ ಇದುವರೆಗೂ ಉತ್ತರ ನೀಡಿಲ್ಲ. ಇಡೀ ದೇಶದಲ್ಲಿ ನಂ.1 ಭ್ರಷ್ಟಾಚಾರಿ ಸಿ.ಎಂ. ಎಂದರೆ ಅದು ಸಿದ್ದರಾಮಯ್ಯ. ರೈತರು, ನಿರುದ್ಯೋಗಿಗಳು, ಬಡವರ ಹೆಸರಿನಲ್ಲಿ ಹಣ ಮಾಡಿದ್ದಾರೆ. ಇಲ್ಲಿರುವುದು ಶೇ.10ರ ಪರ್ಸೆಂಟೇಜ್ ಸರಕಾರ ಎಂದು ಅಮಿತ್ ಶಾ ಲೇವಡಿ ಮಾಡಿದರು.

ಕೇಂದ್ರದಲ್ಲಿರುವ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರಕಾರ ರಾಜ್ಯದ ರೈತರು, ಕೃಷಿಕಾರ್ಮಿಕರು, ಯುವಕರು, ಬಡವರಿಗಾಗಿ ಸುಮಾರು 117 ಕಾರ್ಯಕ್ರಮಗಳನ್ನು ನೀಡಿದ್ದು, ಅವುಗಳು ಸರಿಯಾಗಿ ಜನರಿಗೆ ತಲುಪದಂತೆ ಇಲ್ಲಿನ ಕಾಂಗ್ರೆಸ್ ಸರಕಾರ ನೋಡಿಕೊಂಡಿದೆ ಎಂದು ಆರೋಪಿಸಿದರು..

ವೇದಿಕೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷ ಗಂಗಾಂಜನೇಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News