ಬಿಜೆಪಿ ಅಧಿಕಾರಕ್ಕೆ ಬಂದರೆ ‘ಟಿಪ್ಪು ಜಯಂತಿ' ರದ್ದು: ಆದಿತ್ಯನಾಥ್

Update: 2018-05-09 13:23 GMT

ಹೊಸಪೇಟೆ, ಮೇ 9: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಟಿಪ್ಪು ಸುಲ್ತಾನ್ ಜಯಂತಿಯನ್ನು ರದ್ದುಪಡಿಸಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.

ಬುಧವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ರದ್ದುಪಡಿಸಿ, ಹನುಮಾನ್ ಜಯಂತಿ, ಕೃಷ್ಣ ದೇವರಾಯ ಜಯಂತಿ ಹಾಗೂ ಛತ್ರಪತಿ ಶಿವಾಜಿ ಜಯಂತಿ ಆಚರಣೆಗೆ ತರಲಾಗುವುದು ಎಂದು ಅಭಯ ನೀಡಿದರು.

ಸಿದ್ದರಾಮಯ್ಯ ನೇತೃತ್ವದ ಸರಕಾರ ಮುಸ್ಲಿಮರನ್ನು ಓಲೈಕೆ ಮಾಡುವ ಸಲುವಾಗಿ ಟಿಪ್ಪು ಜಯಂತಿ ಆಚರಣೆಗೆ ತಂದಿದೆ. ಆದರೆ, ಹಿಂದೂಧರ್ಮದ ಪ್ರತೀಕವಾಗಿರುವ ಹನುಮಾನ್, ಶ್ರೀಕೃಷ್ಣದೇವರಾಯ ಹಾಗೂ ಶಿವಾಜಿ ಜಯಂತಿಗಳನ್ನು ಕೈಬಿಟ್ಟಿದೆ ಎಂದು ಯೋಗಿ ಆದಿತ್ಯನಾಥ್ ಟೀಕಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ರೈತರಿಗೆ ಯಾವ ಕೊಡುಗೆಯನ್ನೂ ನೀಡಿಲ್ಲ. ಹೀಗಾಗಿಯೇ ಕರ್ನಾಟಕದಲ್ಲಿ 3500 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಆರೋಪಿಸಿದ ಅವರು, ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಹಲವು ಯೋಜನೆ ರೂಪಿಸಿದೆ ಎಂದು ವಿವರಿಸಿದರು.

ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರ ಭ್ರಷ್ಟಾಚಾರ, ಮರಳು ಮಾಫಿಯಾ ಸೇರಿದಂತೆ ಹಲವು ಹಗರಣಗಳಲ್ಲಿ ತೊಡಗಿದೆ. ಆದುದರಿಂದ ಕರ್ನಾಟಕ ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಕಾನೂನು ಸುವ್ಯವಸ್ಥೆ ಕಾಡುವುದು ಸೇರಿದಂತೆ ಎಲ್ಲ ರಂಗಗಳಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

ವಿಜಯನಗರ ಕ್ಷೇತ್ರದ ಮತದಾರರು ಬಿಜೆಪಿ ಅಭ್ಯರ್ಥಿ ಎಚ್.ಆರ್.ಗವಿಯಪ್ಪ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ರೈತ ಮುಖಂಡ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಅಧಿಕಾರಕ್ಕೆ ತರಬೇಕು. ಆ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್.ಆರ್.ಗವಿಯಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಮೃತ್ಯುಂಜಯ ಜಿನಗಾ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ರಾಣಿ ಸಂಯುಕ್ತಾ, ಶಶಿಕಲಾ, ಕಿಶೋರ ಪತ್ತಿಕೊಂಡ, ಕಟಿಗಿ ರಾಮಕೃಷ್ಣ ಸೇರಿದಂತೆ ಇನ್ನಿತರರು ಬಹಿರಂಗ ಸಭೆಯಲ್ಲಿ ಉಪಸ್ಥಿತರಿದ್ದರು.

‘ತೀವ್ರ ಜಿದ್ದಾಜಿದ್ದಿ ಸೃಷ್ಟಿಸಿರುವ ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ಆರ್.ಗವಿಯಪ್ಪ ಅವರನ್ನು ಗೆಲ್ಲಿಸುವ ಉದ್ದೇಶದಿಂದ ಏರ್ಪಡಿಸಿದ್ದ ಬಹಿರಂಗ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಜನರು ಆಗಮಿಸಲಿಲ್ಲ. ಹೀಗಾಗಿ ಯುಪಿ ಸಿಎಂ ಆದಿತ್ಯನಾಥ್ ಖಾಲಿ ಕುರ್ಚಿಗಳಿಗೆ ಭಾಷಣ ಮಾಡಿದ ಪ್ರಸಂಗ ನಡೆಯಿತು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News