ಬಿಜೆಪಿಯವರು ಹಿಂದೂ ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ: ಸಿ.ಎಂ ಸಿದ್ದರಾಮಯ್ಯ
ಮೈಸೂರು,ಮೇ.9: ಹಿಂದೂ ಮತ್ತು ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿಯವರು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಗೆಜ್ಜಗಳ್ಳಿ, ಮಂಡಕಳ್ಳಿ, ಕೆ.ಎಸ್.ಹುಂಡಿ, ಕಡಕೊಳ, ಬ್ಯಾತಹಳ್ಳಿ, ಸಿಂದುವಳ್ಳಿ, ಚಿಕ್ಕಕಾನ್ಯ, ದೊಡ್ಡಕಾನ್ಯ, ದೂರ, ದಡದ ಕಲ್ಲಹಳ್ಳಿ, ತಳೂರು ಗಿರಿದರ್ಶಿನಿ ಬಡಾವಣೆ ಸೇರಿದಂತೆ ಹಲವು ಕಡೆ ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು. ಕಡಕೊಳ ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ಹಿಂದೂ ಮುಸ್ಲಿಮರ ನಡುವೆ ಬೆಂಕಿ ಹಚ್ಚಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇನ್ನು ಜೆಡಿಎಸ್ ಪಕ್ಷದವರು ಅವಕಾಶವಾದಿಗಳು. ಅವರು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿಟ್ಟರೆ ಬೇರೆಲ್ಲೂ ಗೆಲ್ಲುವುದಿಲ್ಲ ಎಂದು ಪುನರುಚ್ಚರಿಸಿದರು.
ಕಾಂಗ್ರೆಸ್ ಎಲ್ಲಾ ವರ್ಗಗಳನ್ನು ಗೌರವಿಸುವ ಪಕ್ಷ. ನಾವು ಮಾಡಿರುವ ಅನ್ನಭಾಗ್ಯ, ಕ್ಷೀರ ಭಾಗ್ಯ, ಉಚಿತ ಶಿಕ್ಷಣ ಎಲ್ಲಾ ಸಮಾಜದವರಿಗೂ ಅನ್ವಯ ಆಗುತ್ತದೆ. ವಿಶೇಷವಾಗಿ ಎಸ್ಸಿ ಎಸ್ಟಿಗಳಿಗೆ ಅವರ ಜಾತಿಗೆ ಅನುಸಾರವಾಗಿ ಎಸ್‍ಸಿಪಿ ಟಿಎಸ್‍ಪಿ ಯೋಜನೆಯಡಿ ಪ್ರತಿ ವರ್ಷ ರೂ.28 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ ಎಂದು ಹೇಳಿದರು.
ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ನಿಲುವು ನಮ್ಮದು. ಅಂಬೇಡ್ಕರ್, ಬಸವಣ್ಣ, ಗಾಂಧಿ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ಅಧಿಕಾರ ನಡೆಸುತ್ತಾ ಬಂದಿದ್ದೇನೆ ಎಂದು ಹೇಳಿದರು.
ಕಡಕೊಳ್ ಗ್ರಾಮದ ಅಭಿವೃದ್ದಿಗಾಗಿ ನಾನು 3.5 ಕೋಟಿ.ರೂ ನೀಡಿದ್ದು, ಪರಿಶಿಷ್ಟ ಜಾತಿಯವರಿಗೆ ಸಮುದಾಯ ಭವನ, ಮುಸ್ಲಿಮರಿಗೆ, ದಲಿತರಿಗೆ ಪ್ರತ್ಯೇಕ ಭವನಗಳನ್ನು ಕಟ್ಟಿಸಿಕೊಟ್ಟಿದ್ದೇವೆ. ನಾನು ಮತ್ತೆ ಮುಖ್ಯಮಂತ್ರಿಯಾಗಿ ನಿಮ್ಮ ಬಳಿ ಬರುತ್ತೇನೆ. ಹಾಗಾಗಿ ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಸತ್ಯನಾರಾಯಣ, ಕಾಂಗ್ರೆಸ್ ಮುಖಂಡರಾದ ಮಾವಿನಹಳ್ಳಿ ಸಿದ್ದೇಗೌಡ, ಕೆ.ಮರೀಗೌಡ, ಜಿ.ಪಂ ಸದಸ್ಯೆ ನಂದಿನಿ ಚಂದ್ರಶೇಖರ್, ತಾ.ಪಂ ಸದಸ್ಯ ಹಾರೋಹಳ್ಳಿ ಸುರೇಶ್‍ಕುಮಾರ್, ಕೆಪಿಸಿಸಿ ಸದಸ್ಯರಾದ ಎನ್.ಭಾಸ್ಕರ್, ಹುಲ್ಲಹಳ್ಳಿ ಬಸವರಾಜು, ಕೃಷ್ಣ ಸೇರಿದಂತೆ ಹಲವರು ಮುಖ್ಯಮಂತ್ರಿಗಳ ಜೊತೆಯಲ್ಲಿದ್ದರು.