ಸಿಎಂ ಸಿದ್ದರಾಮಯ್ಯ ಜಾತಿ ಜಾತಿಗಳ ನಡುವೆ ದ್ವೇಷ ಬಿತ್ತುತ್ತಿದ್ದಾರೆ: ನರೇಂದ್ರ ಮೋದಿ

Update: 2018-05-09 16:18 GMT

ಚಿಕ್ಕಮಗಳೂರು, ಮೇ 9: ಬಸವಣ್ಣ ಅವರ ಬಸವ ಧರ್ಮ, ಶಂಕರಾಚಾರ್ಯರ ಅಧ್ವೈತ ಸಿದ್ಧಾಂತಗಳನ್ನು ಕರ್ನಾಟಕದಲ್ಲಿ ಜನತೆ ಅನುಸರಿಸಿ ಸೌಹಾರ್ದದಿಂದ ಬದುಕುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾತಿ ಜಾತಿಗಳನ್ನು ಒಡೆದು ಆಳುತ್ತಿದೆ. ಸಮುದಾಯಗಳ ನಡುವೆ ದ್ವೇಷದ ವಿಷ ಬೀಜಗಳನ್ನು ಬಿತ್ತುತ್ತಿದ್ದಾರೆ. ನಾಡಿನ ಸಾಮರಸ್ಯವನ್ನು ಕದಡುವಂತಹ ಕೃತ್ಯದ ಮೂಲಕವೇ ಮತ್ತೆ ಅಧಿಕಾರಕ್ಕೆ ಬರಲು ಸಂಚು ರೂಪಿಸುತ್ತಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರಕಾರದ ವಿರುದ್ಧ ಗುಡುಗಿದ್ದಾರೆ.

ಚಿಕ್ಕಮಗಳೂರು ನಗರದ ಜಿಲ್ಲಾ ಆಟದ ಮೈದಾನದಲ್ಲಿ ಬುಧವಾರ ಅವರು ಚಿಕ್ಕಮಗಳೂರು ಕ್ಷೇತ್ರ ಸೇರಿದಂತೆ ಜಿಲ್ಲೆಯ ತರೀಕೆರೆ, ಕಡೂರು, ಮೂಡಿಗೆರೆ, ಶೃಂಗೇರಿ ಮತ್ತು ಹಾಸನ, ಬೇಲೂರು, ಸಕಲೇಶಪುರ ವಿಧಾನಸಭೆ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಜಾತಿಗಳನ್ನು ಎತ್ತಿಕಟ್ಟಿ ಒಡೆದು ಆಳುವ ಕಾಂಗ್ರೆಸ್ ಸಂಸ್ಕೃತಿ ಮತ್ತೆ ಮುಂದುವರಿಯಲಿದೆ. ನಾಡಿನ ಶಾಂತ ವಾತಾವರಣವನ್ನು ಕಾಂಗ್ರೆಸ್ ಸರಕಾರ ಹಾಳುಗೆಡವಲಿದ್ದಾರೆ. ಇದಕ್ಕೆ ಇಲ್ಲಿನ ಮತದಾರರು ಅವಕಾಶ ನೀಡಬಾರದು. ಪಕ್ಷದ ಕಾರ್ಯಕರ್ತರು ಪ್ರತೀ ಮತದಾರರನ್ನು ತಲುಪಿ ಕಾಂಗ್ರೆಸ್ ಸರಕಾರದ ಜನ ವಿರೋಧಿ ಆಡಳಿತದ ಬಗ್ಗೆ ಮನವರಿಕೆ ಬಿಜೆಪಿ ಅಭ್ಯರ್ಥಿಗಳನ್ನೆ ಗೆಲ್ಲಿಸುವ ಮೂಲಕ ಯಡಿಯೂರಪ್ಪ ಅವರ ಸರಕಾರವನ್ನು ಅಸ್ತಿತ್ವಕ್ಕೆ ತಂದು ಕಾಂಗ್ರೆಸ್ ಮುಕ್ತ ರಾಜ್ಯ ಮಾಡಲು ಪಣತೊಡಬೇಕೆಂದು ಮೋದಿ ಕರೆ ನೀಡಿದರು.

ತಮ್ಮ ಭಾಷಣದ ಉದ್ದಕ್ಕೂ ಕಾಂಗ್ರೆಸ್ ಪಕ್ಷ ಹಾಗೂ ಇಂದಿರಾಗಾಂಧಿ ಕುಟುಂಬದ ಬಗ್ಗೆ ಹರಿಹಾಯ್ದ ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅವಸಾನದ ಅಂಚಿನಲ್ಲಿದೆ. ಚುನಾವಣೆಗಳಲ್ಲಿ ಪದೇ ಪದೇ ಸೋಲು ಕಾಣುತ್ತಿದ್ದರೂ ಮುಖಂಡರಿಗೆ ಅಹಂಕಾರ ಕಮ್ಮಿಯಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಜನತಂತ್ರ ವ್ಯವಸ್ಥೆಯಲ್ಲಿ ನಂಬಿಕೆಯೇ ಇಲ್ಲ ಎಂದು ದೂರಿದ ಅವರು, ರಾಹುಲ್‍ಗಾಂಧಿ ಕೇಂದ್ರ ಸರಕಾರದ ವಿರುದ್ಧ ಅಪಪ್ರಚಾರ ಮಾಡುತ್ತಾ ಪ್ರಧಾನಿ ಕುರ್ಚಿ ಕನಸು ಕಾಣುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಹೊಗಳುತ್ತಾ ತಮ್ಮ ಸಂಸದ ಕ್ಷೇತ್ರವನ್ನು ಕಡೆಗಣಿಸಿದ್ದಾರೆಂದು ಆರೋಪಿಸಿದರು. 

ಮಲೆನಾಡಿನ ಅಡಿಕೆ ಬೆಳೆಗಾರರ ವಿರುದ್ಧವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಅಡಿಕೆ ಬೆಳೆ ಆರೋಗ್ಯಕ್ಕೆ ಮಾರಕ ಎಂದು ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕರೇ ಕೇಂದ್ರ ಸರಕಾರಕ್ಕೆ ಈ ಹಿಂದೆ ವರದಿ ನೀಡಿದ್ದಾರೆಂದು ಆರೋಪಿಸಿದ ಮೋದಿ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಈ ಹಿಂದೆ ರಾಜ್ಯದ ಎಲ್ಲ ರೈತರು, ಕಾಫಿ, ಅಡಿಕೆ ಬೆಳೆಗಾರರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಈ ಕಾರಣಕ್ಕೆ ರಾಜ್ಯವನ್ನು ಮೇ 12ರ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ರಾಜ್ಯ ಮಾಡಬೇಕು. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದಲ್ಲಿ ಬಿಜೆಪಿ ರಾಜ್ಯದ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಮಾಡಿ ತೋರಿಸುತ್ತೇವೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದಲ್ಲಿ ಅಭಿವೃದ್ಧಿ ವೇಗ ಪಡೆಯಲಿದೆ ಎಂದ ಪ್ರಧಾನಿ ಮೋದಿ, ಮೇ 12 ಚುನಾವಣೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮತಚಲಾವಣೆಯಾಗಬೇಕು. ಪಕ್ಷದ ಅಭ್ಯರ್ಥಿಗಳನ್ನೂ ಭಾರೀ ಅಂತರದಿಂದ ಗೆಲ್ಲಿಸಬೇಕೆಂದು ಪ್ರಧಾನಿ ಕರೆ ನೀಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರು ನಗರದ ಮುಖ್ಯ ರಸ್ತೆಗಳಲ್ಲಿ ಬೈಕ್ ರ್ಯಾಲಿ, ಮೆರವಣಿಗೆ ನಡೆಸಿದರು. ಮೋದಿ ಭಾಷಣಕ್ಕೂ ಮುನ್ನ ಬಿಜೆಪಿ ಅಭ್ಯರ್ಥಿಗಳಾದ ಸಿಟಿ ರವಿ, ಜೀವರಾಜ್, ಕುಮಾರಸ್ವಾಮಿ, ಬೇಲೂರು ಸುರೇಶ್, ಡಿ.ಎಸ್.ಸುರೇಶ್, ಬೆಳ್ಳಿ ಪ್ರಕಾಶ್ ಮಾತನಾಡಿ ಮತಯಾಚಿಸಿದರು. ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. 

ಕಳೆದ 5 ವರ್ಷಗಳಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವ್ಯಾಪಕ ಭ್ರಷ್ಟಾಚಾರ ನಡೆಸಿದೆ. ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಹಂಚಲು ಕಾಂಗ್ರೆಸ್ ಮುಖಂಡರು ಕೂಡಿಟ್ಟಿದ್ದ 130 ಕೋ.ರೂ. ಅಕ್ರಮ ಹಣವನ್ನು ರಾಜ್ಯಾದ್ಯಂತ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಹಣ ಕಾಂಗ್ರೆಸ್‍ನವರಿಗೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಮೋದಿ, ಕಾಂಗ್ರೆಸ್ ಸರಕಾರ 10 ಪರ್ಸೆಂಟೆಜ್ ಸರಕಾರವಾಗಿದೆ. ಕಳೆದ 5 ವರ್ಷಗಳಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡುತ್ತಲೇ ಕಾಲಾಹರಣ ಮಾಡಿ ಅಭಿವೃದ್ಧಿಯನ್ನು ಮರೆತಿದೆ. ಆದರೆ ಯಡಿಯೂರಪ್ಪ ಸರಕಾರ ರಾಜ್ಯದ ಅಭಿವೃದ್ಧಿಗೆ ಇಂಜಿನ್‍ನಂತೆ ಕೆಲಸ ಮಾಡಿದ್ದಾರೆ.
- ನರೇಂದ್ರ ಮೋದಿ, ಪ್ರಧಾನ ಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News