×
Ad

ಹನೂರು: ಬಿಜೆಪಿ ಅಭ್ಯರ್ಥಿ ಪ್ರೀತನ್ ನಾಗಪ್ಪ ಪರ ತೇಜಸ್ವಿನಿಗೌಡ ರೋಡ್ ಶೋ

Update: 2018-05-09 22:23 IST

ಹನೂರು,ಮೇ.09: ಕೇಂದ್ರವು ಜಾರಿಗೆ ತಂದಿರುವ ಯೋಜನೆಗಳನ್ನು ರಾಜ್ಯದ ಸಿದ್ದರಾಮಯ್ಯ ಸರ್ಕಾರ ತನ್ನದೆಂದು ಬಿಂಬಿಸಿಕೊಳ್ಳುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ ತೇಜಸ್ವಿನಿಗೌಡ ತಿಳಿಸಿದರು.

ಪಟ್ಟಣದ ಮ.ಬೆಟ್ಟದ ರಸ್ತೆ, ಸೊಪ್ಪಿನಕೇರಿ ಬೀದಿ, ಅಂಬೇಡ್ಕರ್ ನಗರ, ಮಠದ ಬೀದಿ, ಬಂಡಳ್ಳಿ ಮುಖ್ಯ ರಸ್ತೆ, ಲೊಕ್ಕನಹಳ್ಳಿ ಮುಖ್ಯರಸ್ತೆ ಹಾಗೂ ಪಟ್ಟಣದ ಇನ್ನಿತರ ವಾರ್ಡ್‍ಗಳಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಅವರ ಪರ ರೋಡ್ ಶೋ ನಡೆಸುವುದರ ಮೂಲಕ ಮತಯಾಚಿಸಿದರು.

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಅಕ್ಕಿಗೆ ಕೇಂದ್ರ ಸರ್ಕಾರ 29 ರೂ ಭರಿಸುತ್ತಿದ್ದು, ರಾಜ್ಯ ಸರ್ಕಾರ ಕೇವಲ 3ರೂ ವನ್ನು ನೀಡುತ್ತಿದೆ. ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನತೆಗೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಬೀಗುತ್ತಿದೆ. ಆದರೆ ಅನ್ನಭಾಗ್ಯ ಯೋಜನೆಯ ಬಹುಪಾಲು ಕೇಂದ್ರ ಸರ್ಕಾರದ್ದಾಗಿದೆ. ಜೊತೆಗೆ ಕಾಂಗ್ರೆಸ್ ಸರ್ಕಾರ ಕಳೆದ 5 ವರ್ಷದ ಅವಧಿಯಲ್ಲಿ ಜನತೆಗೆ ಉತ್ತಮ ಆಡಳಿತ ನೀಡಿಲ್ಲ. ಆದರೆ ಬಿ.ಎಸ್ ಯಡಿಯೂರಪ್ಪ ಅವರ ಅಧಿಕಾರವಧಿಯಲ್ಲಿ ರೈತರು, ಬಡವರು, ದಲಿತರು, ಹಿಂದುಳಿದ ವರ್ಗ ಹಾಗೂ ಮಹಿಳೆಯರ ಕಲ್ಯಾಣಕ್ಕೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಉತ್ತಮ ಆಡಳಿತ ನೀಡಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ್ಯಂತ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವುದು ಖಚಿತ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಅವರಿಗೆ ಮತ ನೀಡಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ಡಾ.ಪ್ರೀತನ್ ನಾಗಪ್ಪ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಜಯಂತಿ, ಪಕ್ಷದ ಹಿರಿಯ ಮುಖಂಡಸಿ.ಎಂ ರಾಜೇಂದ್ರಕುಮಾರ್ ಡಾ.ದತ್ತೇಶ್‍ಕುಮಾರ್, ನಟರಾಜೇಗೌಡ, ನಾಗರಾಜು, ಗೋವಿಂದಣ್ಣ, ಸುಬ್ಬಣ್ಣ, ರಾಜಣ್ಣ, ವೆಂಕಟೇಗೌಡ ಹಾಗೂ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News