ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಡವರ ಬದುಕನ್ನು ಅತಂತ್ರಗೊಳಿಸಿದೆ: ನರೇಂದ್ರ ಮೋದಿ
ಕೋಲಾರ,ಮೇ.09: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಲೋಕತಂತ್ರ ವಿರೋಧಿ ಹಾಗೂ ಸಂವಿದಾನ ಬುಡಮೇಲು ಮಾಡುವುದು, ಕೋಮುವಾದ, ಜಾತಿವಾದ, ಅಪರಾಧ, ಭ್ರಷ್ಟಾಚಾರ ಮತ್ತು ಗುತ್ತಿಗೆ ಎಂಬ 6 ರೋಗಗಳು ಅಂಟಿಕೊಂಡಿದ್ದು, ಇದು ಜನವಿರೋಧಿ ಸರ್ಕಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ಅವರು ಇಂದು ಚುನಾವಣಾ ಪ್ರಚಾರದ ಅಂಗವಾಗಿ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೋಲಾರ ರಸ್ತೆಯ ಬೀರಂಡಹಳ್ಳಿ ಗೇಟ್ ಬಳಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಡವರ ಬದುಕನ್ನು ಅತಂತ್ರಗೊಳಿಸಿದೆ ಎಂದರು.
ಸುಳ್ಳು ಹೇಳಿಕೊಂಡು ಕಾಲ ಕಳೆಯುವ ಸರ್ಕಾರ ಇದಾಗಿದ್ದು, ಸಂವಿದಾನ ವಿರೋಧಿ ಧೋರಣೆಯನ್ನು ಮೈಗೂಡಿಸಿಕೊಂಡಿದೆ. ಧರ್ಮ ಧರ್ಮಗಳ ಮದ್ಯೆ ಸಾಮರಸ್ಯವನ್ನು ಕೆಡಿಸಿ ಕೋಮುವಾದವನ್ನ ಬಿತ್ತುತ್ತಿದೆ. ಅದರ ಜೊತೆಗೆ ಜಾತಿ ಜಾತಿಗಳ ನಡುವೆಯೂ ಸಂಘರ್ಷಗಳನ್ನು ಹುಟ್ಟುಹಾಕುತ್ತಿದೆ ಎಂದು ಆರೋಪಿಸಿದದರು.
ದಿನಬೆಳಗಾದರೆ ಅಪರಾದ ಪ್ರಕರಣಗಳು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುತ್ತಿದೆ. ಜನತೆಯನ್ನು ಭಯಗೊಳಿಸಿ ಅವರ ಗಮನ ಬೇರೆಡೆಗೆ ಸೆಳೆದು ಗುತ್ತಿಗೆ ಹೆಸರಲ್ಲಿ ಭ್ರಷ್ಟಾಚಾರ ಮಾಡಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ ಎಂದರು.
ಕಳೆದ 2ವರ್ಷಗಳಿಂದ ನಡೆಯುತ್ತಿರುವ ಚುನಾವಣೆಗಳಲ್ಲಿ ಎಲ್ಲಾ ರಾಜ್ಯಗಳು ಬಿಜೆಪಿ ಮಯವಾಗುತ್ತಿರುವ ವೇಳೆ ರಾಹುಲ್‍ಗಾಂಧಿಯ ಈ ನಡೆ ಇತ್ತೀಚೆಗೆ ಜೊತೆಗೆ ಸೇರಲು ಆರಂಭಿಸಿರುವ ಮಿತ್ರ ಪಕ್ಷಗಳ ನಾಯಕರಿಗೆ ಇರುಸು ಮುರುಸು ಆಗುತ್ತಿದ್ದು, ಅವರ ಮದ್ಯೆ ಮನಸ್ಥಾಪಗಳು ಆರಂಭವಾಗಿವೆ ಎಂದು ಹೇಳಿದರು.
ಕಳೆದ 10 ವರ್ಷಗಳು ಕೇಂದ್ರದಲ್ಲಿ ಆಡಳಿತ ನಡೆಸಿದ ಮಾಜಿ ಪ್ರಧಾನಿ ಮನಮೋಹನ್‍ಸಿಂಗ್ ಸಕಾರ ವಂಶವಾಹಿನಿಗೆ ರಿಮೋಟ್ ಕಂಟ್ರೋಲ್ ಆಗಿತ್ತು ಎಂದು ಆರೋಪಿಸಿದ ಅವರು ಕಳೆದ 4 ವರ್ಷಗಳಿಂದ ನಡೆಯುತ್ತಿರುವ ಬಿಜೆಪಿ ಸರ್ಕಾರ ಜನರ ರಿಮೋಟ್‍ನಲ್ಲಿ ನಡೆಯುತ್ತಿರುವುದರಿಂದ ಜನತೆಗೆ ಬಿಜೆಪಿ ಮೇಲೆ ಭರವಸೆ ಬಂದಿದೆ ಎಂದರು.
ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮತ್ತು ಆಡಳಿತವನ್ನು ಮೆಚ್ಚಿದ ಜನ ಇತ್ತೀಚೆಗೆ ಮಹಾರಾಷ್ಟ್ರ, ಗೋವಾ, ಮದ್ಯಪ್ರದೇಶ್, ರಾಜಾಸ್ಥಾನ್, ಚತ್ತೀಸ್‍ಘಡ್, ಉತ್ತರಾಖಂಡ್, ಹಿಮಾಚಲಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್‍ಗಳಲ್ಲಿ ನಡೆದ ವಿಧಾನಸಬಾ ಚುನಾವನೆಗಳಲ್ಲಿ ಕಾಂಗ್ರೇಸ್‍ನ್ನು ಸೋಲಿಸಿ ಬಿ.ಜೆ.ಪಿಯನ್ನು ಗೆಲ್ಲಿಸಿದೆ ಎಂದರು.
ಕಾಂಗ್ರೆಸ್ ಪಕ್ಷ ದಲಿತರ, ಅಲ್ಪಸಂಖ್ಯಾತರ, ಬಡವರ, ಮಹಿಳೆಯರ ಮತ್ತು ಶ್ರೀಸಾಮಾನ್ಯರ ವಿರೋಧಿ ಮನಸ್ಥಿತಿಯನ್ನು ಹೊಂದಿದೆ ಎಂದು ದೂರಿದ ಅವರು ಕರ್ನಾಟಕದಲ್ಲಿ ಕಳೆದ ಬಾರಿ ನಡೆದ ಚುನಾವಣೆಯ ವೇಳೆ ದಲಿತರಿಗೆ ಅಧಿಕಾರ ಕೊಡುತ್ತೇವೆಂದು ಹೇಳಿ ಗೆದ್ದು ನಂತರ ಮಲ್ಲಿಕಾರ್ಜುನ ಖರ್ಗೆಗೆ ಮೋಸ ಮಾಡಿದರು ಎಂದರು. ತನ್ನ ಮನೆಯ ನಾಲ್ಕು ಜನರಿಗೆ ರಾಷ್ಟ್ರಪತಿ ಪ್ರಶಸ್ತಿಯನ್ನ ಪಡೆಯುವಲ್ಲಿ ಉತ್ಸಾಹ ತೋರಿದ ಆ ಪಕ್ಷದ ನಾಯಕರು ಸಂವಿಧಾನ ರಚಿಸಿಕೊಟ್ಟು ದೇಶದ ಜನ ಸುಖಶಾಂತಿಯಿಂದ ಬದುಕಲು ಬುನಾದಿ ಹಾಕಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ರಿಗೆ ಪ್ರಶಸ್ತಿ ಕೊಡಿಸಿಲ್ಲ ಎಂದರು.
ಜಿಲ್ಲೆಯ ಅಭ್ಯರ್ಥಿಗಳಾದ ಕೆ.ಜಿ.ಎಫ್‍ನ ಅಶ್ವನಿ ಸಂಪಂಗಿ, ಬಂಗಾರಪೇಟೆಯ ಬಿ.ಪಿ.ವೆಂಕಟಮುನಿಯಪ್ಪ, ಮಾಲೂರಿನ ಕೃಷ್ಣಯ್ಯಶೆಟ್ಟಿ, ಕೋಲಾರ ಓಶಕ್ತಿ ಚಲಪತಿ, ಮುಳಬಾಗಿಲಿನ ಅಂಬರೀಶ್, ಶ್ರೀನಿವಾಸಪುರದ ಡಾ.ವೇಣುಗೋಪಾಲ್ ವೇದಿಕೆಯಲ್ಲಿದ್ದರು.