ಮಂಡ್ಯ: ಪರೀಕ್ಷೆ ಬರೆದ ದಿನವೇ ಹಸೆಮಣೆ ಏರಿದ ಯುವತಿ
ಮಂಡ್ಯ, ಮೇ 9: ಯುವತಿಯೊಬ್ಬಳಿಗೆ ಇವತ್ತು ವಿಶೇಷ ದಿನ. ಪರೀಕ್ಷೆ ಮತ್ತು ಮದುವೆ ಎರಡೂ ಒಟ್ಟೊಟ್ಟಿಗೆ ಕೂಡಿಬಂದು ಡಬಲ್ ಧಮಾಕಾ ಆಗಿತ್ತು. ಒಂದು ಕಡೆ ಶೈಕ್ಷಣಿಕ ಪರೀಕ್ಷೆ, ಮತ್ತೊಂದೆಡೆ ಹೊಸ ಬದುಕಿಗೆ ಹೆಜ್ಜೆಯಿಡುತ್ತಿರುವ ವಿಶೇಷ ಪರೀಕ್ಷೆ.
ಕೆ.ಆರ್.ಪೇಟೆ ತಾಲೂಕು ಅಗ್ರಹಾರ ಬಾಚಹಳ್ಳಿ ಸುಧಾ ಯೋಗೇಶ್ ದಂಪತಿ ಪುತ್ರಿ ಎ.ವೈ.ಕಾವ್ಯ ಬುಧವಾರ ತನ್ನ ಬಿ.ಕಾಂ. ಪದವಿ ಪರೀಕ್ಷೆಯನ್ನು ಎದುರಿಸಿ, ವೈವಾಹಿಕ ಬಂಧನಕ್ಕೂ ಒಳಗಾಗಿದ್ದಾರೆ.
ಕೆ.ಆರ್.ಪೇಟೆ ಕಲ್ಪತರು ಪ್ರಥಮದರ್ಜೆ ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ ವಿದ್ಯಾರ್ಥಿನಿಯಾದ ಕಾವ್ಯಳಿಗೆ, ಕೆ.ಆರ್.ಪೇಟೆ ತಾಲೂಕಿನ ಜಾಗಿನಕೆರೆ ಗ್ರಾಮದ ಕೃಷ್ಣೇಗೌಡರ ಪುತ್ರ ಲೋಹಿತ್ ಜತೆ ಮೇ 9 ರಂದು ವಿವಾಹ ನಿಗದಿಯಾಗಿತ್ತು. ಆದರೆ, ಅದೇ ದಿನ ಕಾವ್ಯಾಳ ಪದವಿ ಪರೀಕ್ಷೆಯ ದಿನಾಂಕವೂ ನಿಗದಿಯಾದ್ದರಿಂದ ಅನಿವಾರ್ಯವಾಗಿ ಬೆಳಗ್ಗೆ 9 ರಿಂದ 11ರವರೆಗೆ ಪರೀಕ್ಷೆಯನ್ನು ಬರೆದು, ನಂತರ, ಕಲ್ಯಾಣಮಂಟಪಕ್ಕೆ ಆಗಮಿಸಿ 11.45ಕ್ಕೆ ನಿಗದಿಯಾಗಿದ್ದ ಮುಹೂರ್ತದಲ್ಲೇ ಲೋಹಿತ್ ಅವರನ್ನು ವರಿಸಿದರು.