ಕರ್ನಾಟಕ ಚುನಾವಣೆ: ಕೊನೆಯ ದಿನ ಪ್ರಚಾರಕ್ಕೆ 50 ಹಿರಿಯ ನಾಯಕರನ್ನು ನಿಯೋಜಿಸಿದ ಬಿಜೆಪಿ

Update: 2018-05-10 07:39 GMT

ಬೆಂಗಳೂರು, ಮೇ 10: ಕರ್ನಾಟಕದ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯಕ್ಕೆ ಇಂದು ತೆರೆ ಬೀಳಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ.

ಕರ್ನಾಟಕ ಚುನಾವಣೆ ಗೆಲ್ಲಲೇಬೇಕೆಂಬ ಹಠ ತೊಟ್ಟಿರುವ ಬಿಜೆಪಿ ರಾಜ್ಯದೆಲ್ಲೆಡೆ ರ್ಯಾಲಿಗಳು ಹಾಗೂ ರೋಡ್ ಶೋಗಳಿಗೆ ಕನಿಷ್ಠ 50 ಹಿರಿಯ ನಾಯಕರನ್ನು ರಾಜ್ಯಕ್ಕೆ ಕರೆ ತಂದಿದೆ. ಈ ಪಟ್ಟಿಯಲ್ಲಿ ಕೇಂದ್ರ ಸಚಿವರು ಹಾಗೂ ಪಕ್ಷದ ಮುಖ್ಯಸ್ಥರಾದ ಅಮಿತ್ ಶಾ ಕೂಡ ಇದ್ದಾರೆ.

ಪ್ರಧಾನಮಂತ್ರಿ ನರೇಂದ್ರಮೋದಿ ಇಂದು ನರೇಂದ್ರ ಮೋದಿ ಆ್ಯಪ್ ಮೂಲಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂದಿ ಬೆಂಗಳೂರಿನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರ್ನಾಟಕದ ಸಿಎಂ ಸಿದ್ಧರಾಮಯ್ಯ ಸ್ಪರ್ಧಿಸುತ್ತಿರುವ ಬದಾಮಿಯಲ್ಲಿ ರೋಡ್ ಶೋ ನಡೆಸಿದ್ದಾರೆ. ಸಂಜೆ 4 ಗಂಟೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಅನಂತ್ ಕುಮಾರ್, ಪ್ರಕಾಶ್ ಜಾವ್ಡೇಕರ್, ಪಿಯೂಷ್ ಚಾವ್ಲಾ, ಡಿವಿ ಸದಾನಂದ ಗೌಡ, ಅನುರಾಗ್ ಠಾಕೂರ್, ಕೃಷ್ಣಪಾಲ್ ಗುಜ್ಜರ್ ಹಾಗೂ ಸಂತೋಷ್ ಗಾಂಗ್ವಾರ್ ಕರ್ನಾಟಕದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.

ಈ ಎಲ್ಲ ನಾಯಕರು ರಾಜ್ಯಾದ್ಯಂತ ಸುಮಾರು 50 ಮೇಗಾ ರೋಡ್ ಶೋಗಳನ್ನು ನಡೆಸಲಿದ್ದಾರೆ.

ಬಿಜೆಪಿ ಮುಖ್ಯಮಂತ್ರಿಗಳಾದ ರಮಣ್ ಸಿಂಗ್ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ರೋಡ್‌ಶೋಗಳಲ್ಲಿ ಭಾಷಣ ಮಾಡಿದ್ದಾರೆ.

‘‘ಗುಜರಾತ್‌ನಲ್ಲಿ ಕಾಂಗ್ರಸ್ ಪಕ್ಷ ಬಿಜೆಪಿಯನ್ನು ಸೋಲಿಸುವ ಸನಿಹ ತಲುಪಿತ್ತು. ಕರ್ನಾಟಕದಲ್ಲಿ ನಮ್ಮ ಪಕ್ಷವೇ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಈ ಚುನಾವಣೆ ಎರಡು ಸಿದ್ಧಾಂತಗಳ ನಡುವೆ ನಡೆಯುತ್ತಿದೆ’’ ಎಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ.ಜಿ. ಪರಮೇಶ್ವರ್ ಸಹಿತ ಪಕ್ಷದ ಹಿರಿಯ ನಾಯಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News