ಮಡಿಕೇರಿ: ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ಮಾರಾಮಾರಿ
ಮಡಿಕೇರಿ, ಮೇ.10: ಚುನಾವಣಾ ಪ್ರಚಾರ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಅತಿರೇಕಕ್ಕೇರಿ ಪರಸ್ಪರ ಹಲ್ಲೆ ನಡೆದು ಎರಡು ಪಕ್ಷದ ಕಾರ್ಯಕರ್ತರಿಗೆ ಗಂಭೀರ ಗಾಯಗಳಾದ ಘಟನೆ ಗೋಣಿಕೊಪ್ಪಲು ಎರಡನೇ ವಿಭಾಗದಲ್ಲಿ ಬುಧವಾರ ರಾತ್ರಿ ನಡೆದಿದೆ ಎಂದು ತಿಳಿದು ಬಂದಿದೆ.
ಎರಡನೇ ವಿಭಾಗದಲ್ಲಿ ಒಂದೇ ಸಮಯದಲ್ಲಿ ಮತಯಾಚನೆ ನಡೆಸುತ್ತಿದ್ದ ವೇಳೆ ಎರಡು ಪಕ್ಷದ ಕಾರ್ಯಕರ್ತರ ನಡುವಿನ ಮಾತಿನಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಹಲ್ಲೆ ನಡೆದಿದೆ. ಈ ಸಂದರ್ಭ ಗೋಣಿಕೊಪ್ಪಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜೇಶ್, ಕಾರ್ಯಕರ್ತರುಗಳಾದ ಅಯ್ಯಪ್ಪ, ಪಳನಿ, ರವಿ, ಮಣಿ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ನಗರಾಧ್ಯಕ್ಷ ಕರ್ತಂಡ ಸೋಮಣ್ಣ ಹಾಗೂ ಗಾ.ಪಂ ಸದಸ್ಯ ಮುರುಗ ಅವರಿಗೆ ಗಂಭೀರ ಗಾಯಗಳಾಗಿದೆ ಎನ್ನಲಾಗಿದೆ.
ಎರಡು ಗುಂಪಿನ ನಡುವಿನ ಘರ್ಷಣೆಯಿಂದ ಶಾಂತಿ ಭಂಗವಾಗಿದ್ದು, ಗಲಾಟೆ ನಡೆಸುತ್ತಿದ್ದ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡುವ ಮೂಲಕ ಪರಿಸ್ಥಿತಿ ಹತೋಟಿಗೆ ತರಲು ಮುಂದಾದರು. ಕಾಂಗ್ರೆಸ್ ನ ಇಬ್ಬರು, ಬಿಜೆಪಿಯ ಆರು ಜನ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ಸುಮಾರು 20 ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ. ಉಳಿದವರ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.