ನಿಶ್ಚಿತಾರ್ಥ ಕಾರ್ಯಕ್ರಮದ ಆಹಾರ ಸೇವಿಸಿ ಓರ್ವ ಮೃತ್ಯು: 30 ಮಂದಿ ಅಸ್ವಸ್ಥ

Update: 2018-05-10 14:48 GMT

ಚಿಕ್ಕಮಗಳೂರು, ಮೇ 10: ಮದುವೆ ನಿಶ್ಚಿತಾರ್ಥಕ್ಕಾಗಿ ತಯಾರಿಸಿದ ಆಹಾರ ಸೇವಿಸಿ ಓರ್ವ ಮೃತಪಟ್ಟು, 30 ಜನರು ಅಸ್ವಸ್ಥರಾಗಿರುವ ಘಟನೆ ತರೀಕೆರೆ ತಾಲೂಕಿನ ನೇರಳಕೆರೆ ಗ್ರಾಮದಲ್ಲಿ ಗುರುವಾರ ವರದಿಯಾಗಿದೆ.

ತಾಲೂಕಿನ ಅರೇಹಳ್ಳಿ ಗ್ರಾಮದ ವಸಂತ ಹಾಗೂ ಅಂಜಲಿ ಎಂಬವರ ವಿವಾಹ ಕಾರ್ಯಕ್ರಮಕ್ಕಾಗಿ ಮಂಗಳವಾರ ನಿಶ್ಚಿತಾರ್ಥ ಕಾರ್ಯಕ್ರಮ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ವರನ ಕಡೆಯವರು ವಧುವಿನ ಮನೆಗೆ ಬಂದಿದ್ದರು. ನಿಶ್ಚಿತಾರ್ಥದ ಬಳಿಕ ವಧುವಿನ ಮನೆಯಲ್ಲಿ ತಯಾರಿಸಿದ ಊಟವನ್ನು ಎಲ್ಲರಿಗೂ ಬಡಿಸಲಾಗಿದ್ದು, ಆಹಾರ ಸೇವಿಸಿದವರ ಪೈಕಿ 30 ಮಂದಿ ಬುಧವಾರ ಬೆಳಗ್ಗೆಯಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಅವರನ್ನು ತರೀಕೆರೆ ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಗುರುವಾರ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವರ ಹಾಗೂ ವರನ ತಂದೆ ಸುಂಕಪ್ಪ ಅವರನ್ನು ಶಿವಮೊಗ್ಗದ ಸರಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತ್ತಿದ್ದ ವೇಳೆ ವರನ ತಂದೆ ಸುಂಕಪ್ಪ ಮಾರ್ಗ ಮಧ್ಯೆ ಮೃತಟ್ಟಿದ್ದಾರೆಂದು ವರದಿಯಾಗಿದೆ. ವರ ಸೇರಿದಂತೆ 7 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. 

ನಿಶ್ಚಿತಾರ್ಥದ ಹಿನ್ನೆಲೆಯಲ್ಲಿ ವಧುವಿನ ಮನೆಯಲ್ಲಿ ಸೋಮವಾರ ರಾತ್ರಿಯೇ ಕೋಳಿ ಸಾಂಬಾರಿನ ಅಡುಗೆ ಮಾಡಲಾಗಿದ್ದು, ಇದನ್ನು ಮಂಗಳವಾರ ಸೇವಿಸಿದ್ದರಿಂದ ಈ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಘಟನೆ ಸಂಬಂಧ ತರೀಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News