×
Ad

ಮಡಿಕೇರಿ: ಕಾಡಾನೆ ಹಾವಳಿ ಪ್ರದೇಶದಲ್ಲಿ 30 ರ‍್ಯಾಪಿಡ್ ರೆಸ್ಪಾನ್ಸ್ ಟೀಂಗಳ ರಚನೆ

Update: 2018-05-10 22:02 IST

ಮಡಿಕೇರಿ, ಮೇ.10: ಜಿಲ್ಲೆಯ ಆನೆ ಹಾವಳಿಗಳಿರುವ ಮತಗಟ್ಟೆಗಳಿಗೆ ಮತದಾರರು ಭಯಮುಕ್ತರಾಗಿ ಬಂದು ಮತಚಲಾಯಿಸುವಂತೆ ಮಾಡಲು ಒಟ್ಟು 30 ರ್ಯಾಪಿಡ್ ರೆಸ್ಪಾನ್ಸ್ ಟೀಂಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಹೇಳಿದ್ದಾರೆ.   

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚುನಾವಣಾಧಿಕಾರಿ ಶ್ರೀ ವಿದ್ಯಾ, ಜಿಲ್ಲೆಯ 30 ಮಾರ್ಗಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳನ್ನೊಳಗೊಂಡ 30 ರ್ಯಾಪಿಡ್ ರೆಸ್ಪಾನ್ಸ್ ಟೀಂಗಳು ಆನೆ ಹಾವಳಿ ಇರುವ ಪ್ರದೇಶಗಳಲ್ಲಿ ಮತದಾರರಿಗೆ ರಕ್ಷಣೆ ಒದಗಿಸಲಿದೆ. ಈ ತಂಡಗಳಿಗೆ 7 ಆರ್‍ಎಫ್‍ಓಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗುತ್ತಿದ್ದು, 5ರಿಂದ 8  ಸಿಬ್ಬಂದಿಗಳು ಈ ತಂಡದಲ್ಲಿ ತುರ್ತುಸೇವೆಗೆ ಲಭ್ಯ ಇರಲಿದ್ದಾರೆ ಎಂದು ಶ್ರೀವಿದ್ಯಾ ಹೇಳಿದರು.

ಪ್ರತಿ ಮತಗಟ್ಟೆಗಳ ಸಿಬ್ಬಂದಿಗಳಿಗೆ ಮೆಡಿಕಲ್ ಕಿಟ್‍ಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಕೊಡಗು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಡದ ರಾಜಕೀಯ ವ್ಯಕ್ತಿಗಳು, ಕಾರ್ಯಕರ್ತರು ಮತದಾನದ ಅವಧಿ ಮುಕ್ತಾಯವಾಗುವ 48 ಗಂಟೆಯ ಒಳಗೆ ಜಿಲ್ಲೆಯಿಂದ ನಿರ್ಗಮಿಸಬೇಕೆಂದು ಶ್ರೀ ವಿದ್ಯಾ ಹೇಳಿದರು. ಈ ಕುರಿತು ಎಲ್ಲಾ ಹೋಂಸ್ಟೇಗಳು, ಲಾಡ್ಜ್ ಗಳಿಗೂ ಸೂಚನೆ ನೀಡಿದ್ದು, ಈ ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಮತದಾರರ ಗುರುತಿನ ಚೀಟಿ ದೊರೆಯದಿದ್ದಲ್ಲಿ 12 ಬಗೆಯ ದಾಖಲಾತಿಗಳಲ್ಲಿ ಯಾವುದಾದರೂ ಒಂದನ್ನು ಮತಗಟ್ಟೆ ಅಧಿಕಾರಿಗಳಿಗೆ ತೋರಿಸಿ ಮತ ಚಲಾಯಿಸಬಹುದೆಂದು ಚುನಾವಣಾಧಿಕಾರಿ ಶ್ರೀ ವಿದ್ಯಾ ಮಾಹಿತಿ ನೀಡಿದರು.  

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಡಿಎಫ್‍ಓ ಮಂಜುನಾಥ್ ಉಪಸ್ಥಿತರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News