ಮೋದಿ ತನ್ನ ಸ್ಥಾನದ ಗೌರವಕ್ಕೆ ತಕ್ಕಂತೆ ಮಾತನಾಡಬೇಕು: ಪ್ರೊ.ಜಿ.ಕೆ.ಗೋವಿಂದರಾವ್

Update: 2018-05-10 17:02 GMT

ಮೈಸೂರು, ಮೇ.10: ಒಬ್ಬ ಜವಾಬ್ದಾರಿಯುತ ಪ್ರಧಾನಿ ತನ್ನ ಸ್ಥಾನದ ಗೌರವಕ್ಕೆ ತಕ್ಕಂತೆ ಮಾತನಾಡಬೇಕು. ಆದರೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಚುನಾವಣಾ ಭಾಷಣ ಅಪ್ರಬುದ್ದ, ಅಪಹಾಸ್ಯ ಮತ್ತು ದಾಖಲೆ ಇಲ್ಲದ ಹೇಳಿಕೆಗಳಾಗಿತ್ತು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರುಗಳ ಬಗ್ಗೆ ಅಷ್ಟೊಂದು ಕೀಳು ಮಟ್ಟದ ಹೇಳಿಕೆಗಳು ಪ್ರಧಾನಿ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದು ಜನ ಕರ್ನಾಟಕ ವೇದಿಕೆಯ ಸದಸ್ಯ ಹಾಗೂ ಪ್ರಗತಿಪರ ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ವಾಗ್ದಾಳಿ ನಡೆಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಒಬ್ಬ ಪ್ರಧಾನಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ಆದರೆ ಮೋದಿ ಮಾತನಾಡುವ ಶೈಲಿ ಘನತೆ ತರುವುದಲ್ಲ. ತಮ್ಮ ಕೈ ಬಾಯಿಯನ್ನು ಅಲ್ಲಾಡಿಸಿ, ಚಪ್ಪಾಳೆ ತಟ್ಟಿ ಜನರನ್ನು ಮೋಡಿ ಮಾಡಬಹುದು ಅಂದುಕೊಂಡಿದ್ದಾರೆ. ಜೊತೆಗೆ ಯಾವುದೇ ದಾಖಲೆ ಇಲ್ಲದೆ 10% ಸರಕಾರ ಎಂದು ಸಿದ್ದರಾಮಯ್ಯ ಅವರ ಬಗ್ಗೆ ಆರೋಪಿಸುತ್ತಾರೆ. . ಒಂದು ಹೇಳಿಕೆ ನೀಡಿದರೆ ಜನ ಅದನ್ನು ಗಂಭೀರವಾಗಿ ಚಿಂತಿಸುವಂತಿರಬೇಕು. ಅದು ಬಿಟ್ಟು ಇಂತಹ ಸಿಲ್ಲಿ ಮಾತುಗಳನ್ನು ಹಾಡಿ ತಮ್ಮ ಗೌರವ ಕಳೆದುಕೊಳ್ಳಬಾರದು ಎಂದು ಹೇಳಿದರು.

ಒಂದೆಡೆ ಮೂಲಭೂತವಾದಿ ಆರೆಸ್ಸೆಸ್ ನ ಸಿದ್ಧಾಂತಕ್ಕೆ ಬದ್ಧತೆ, ಇನ್ನೊಂದೆಡೆ ದೇಶದ ಸಂವಿಧಾನಕ್ಕೆ ಬದ್ಧತೆಯನ್ನು ತೋರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ದ್ವಿಮುಖ ನೀತಿಯಿಂದ ಭಾರತದ ಭವಿಷ್ಯ ಮಸುಕಾಗುತ್ತಿದೆ,. ಪ್ರಧಾನಿ ನರೇಂದ್ರ ಮೋದಿ ಆಡಳಿತ ಅವಧಿಯಲ್ಲಿ ಆತಂಕಕಾರಿ ಬೆಳವಣಿಗೆ ಕಾಣುತ್ತಿದೆ. ಸಮಾನತೆ, ಪ್ರಜಾಪ್ರಭುತ್ವಕ್ಕೆ ಅಪಾಯ ಒದಗಿರುವ ಕಾರಣ ಈ ಚುನಾವಣೆ ನಮ್ಮ ಭಾರತದ ಸಾವು ಬದುಕಿನ ಪ್ರಶ್ನೆಯಾಗಿದೆ ಎಂದು ಪ್ರೊ.ಜಿ.ಕೆ.ಗೋವಿಂದರಾವ್ ಹೇಳಿದರು.

ಮೂಲಭೂತವಾದಿ ತತ್ವಗಳ ಆಧಾರ ಮೇಲೆ ಸೃಷ್ಠಿಯಾದ ಆರೆಸ್ಸೆಸ್ ನ ಮಾರ್ಗದರ್ಶನದಲ್ಲಿ ರೂಪುಗೊಂಡಿರುವ ಬಿಜೆಪಿಯು ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಂದು ರಾಜಕೀಯ ಪಕ್ಷವಾಗಿದೆ. ಒಂದು ರಾಜಕೀಯ ಪಕ್ಷವಾಗಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿ ವರ್ತಿಸುವುದರ ಬದಲು ಬಿಜೆಪಿಯು ಭಾರತ ಕೇವಲ ಹಿಂದೂ ರಾಷ್ಟ್ರವಾಗಬೇಕೆಂದು ಬಯಸಿರುವುದು ಆಘಾತಕಾರಿ ಸಂಗತಿಯಾಗಿದೆ. ಇದರಿಂದಾಗಿ ಬಹು ಸಂಖ್ಯಾತರು, ಅಲ್ಪ ಸಂಖ್ಯಾತರು ಮೊದಲಾದವರು ಬೇಷರತ್ತಾಗಿ ಮಣಿದು ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳಬೇಕಾದ ಸಂದರ್ಭ ಎದುರಾಗುತ್ತದೆಂದರು.

ಬಿಜೆಪಿ ಮುಖಂಡರು ದಲಿತರ ಮನ ಗೆಲ್ಲುವ ಸಲುವಾಗಿ ಮೇಲುನೋಟಕ್ಕೆ ಡಾ.ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕುವರು. ಹಾಗೆಯೇ ದಲಿತರ ಕೊರಳಿಗೆ ಉರುಳು ಹಾಕುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ದೇಶದ ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳಿಕೆಯ ಹಿಂದೆ ತಮ್ಮ ಹಿರಿಯ ನಾಯಕರ ಸ್ಪೂರ್ತಿ ಇಲ್ಲದಿರಲು ಸಾಧ್ಯವಿಲ್ಲ. ಏಕೆಂದರೆ ಪಕ್ಷದ ನಾಯಕರ ಒಪ್ಪಿಗೆ ಇಲ್ಲದೆ ಯಾವ ಸಚಿವನೂ ಆ ರೀತಿ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಜಾಸತ್ತಾತ್ಮಕವಾಗಿ, ಸಮಾನತಾವಾದಿಯಾಗಿ, ದೇಶದ ಚಲನಶೀಲ ಸಂಸ್ಕೃತಿಗೆ, ಮನುಷ್ಯತ್ವಕ್ಕೆ ಯಾವ ಪಕ್ಷ ಬೆಲೆ ಕೊಡುತ್ತದೆಯೋ ಆ ಪಕ್ಷಕ್ಕೆ ಮತ ಹಾಕಿ. ಆದರೆ ಯಾವುದೇ ಕಾರಣಕ್ಕೂ ಇದಕ್ಕೆ ವಿರುದ್ಧವಾದ ಬಿಜೆಪಿಗೆ ಮತ ಹಾಕಬೇಡಿ ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು.

ಶ್ರೀನಿವಾಸಪ್ರಸಾದ್ ಬಿಜೆಪಿ ಪಕ್ಷದ ವಕ್ತಾರರಲ್ಲ: ಬಿಜೆಪಿಯವರು ಸಂವಿಧಾನ ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಬಿಜೆಪಿ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಪ್ರಸಾದ್ ಬಿಜೆಪಿ ಪಕ್ಷದ ವಕ್ತಾರರಲ್ಲ, ಅವರು ಈಗಷ್ಟೇ ಬಿಜೆಪಿ ಸೇರಿದ್ದಾರೆ. ಬಿಜೆಪಿ ಯಾವ ತತ್ವ ಸಿದ್ದಾಂತ ಅಡಿಯಲ್ಲಿದೆ ಎಂಬುದನ್ನು ಪ್ರಸಾದ್ ಅರ್ಥಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುಪ್ರಸಾದ್ ಕೆರಗೋಡು, ಹುಲ್ಕೆರೆ ಮಹದೇವ್, ಮೆಲ್ಳಹಳ್ಳಿ ನಾರಾಯಣ, ಆಲಗೂಡು ಶಿವಕುಮಾರ್ ಉಪಸ್ಥಿತರಿದ್ದರು.

ನಮಗಾಗಿ ನಾವು ಮತ ಚಲಾಯಿಸಬೇಕಿಲ್ಲ, ಸಂವಿಧಾನ ವಿರೋಧಿಗಳ ಕಪಿಮುಷ್ಟಿಯಿಂದ ನಮ್ಮ ಮಕ್ಕಳು ಮೊಮ್ಮಕಳ್ಳನ್ನು ತಪ್ಪಿಸುವ ಸಲುವಾಗಿ ಮತಚಲಾಯಿಸಬೇಕಿದೆ. ಪ್ರಜಾತಂತ್ರವಾದಿ, ಸಮಾಜವಾದಿ ಪಕ್ಷಗಳಿಗೆ ಮತನೀಡಬೇಕಿದೆ.
-ಪ್ರೊ.ಜಿ.ಕೆ.ಗೋವಿಂದರಾವ್, ಪ್ರಗತಿಪರ ಚಿಂತಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News