ಮೈಸೂರು: ಚಾಮುಂಡೇಶ್ವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತಯಾಚನೆ

Update: 2018-05-10 17:10 GMT

ಮೈಸೂರು,ಮೇ.10: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಂತಿಮ ಹಂತದ ಮತ ಭೇಟೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಗ್ರಾಮಗಳಲ್ಲಿ ಮತಯಾಚಿಸಿದರು.

ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಗುರುವಾರ ಮೈಸೂರಿಗೆ ಆಗಮಿಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ವಿಜಯನಗರ ಬಡಾವಣೆ, ಹಿನಕಲ್, ದೇವಗಳ್ಳಿ, ಧನಗಳ್ಳಿ, ಬೋಗಾದಿ ಸೇರಿದಂತೆ ಹಲವು ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.

ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ ನಾನು ಈ ಚುನಾವಣೆಯಲ್ಲಿ ಬಾರಿ ಬಹುಮತದೊಂದಿಗೆ ವಿಜಯಿಯಾಗುತ್ತೇನೆ. ಈಗಾಗಲೇ ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿದ್ದೇನೆ. ಅಲ್ಲಿನ ಜನ ನನ್ನ ಮತ್ತು ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಕ್ಷೇತ್ರದಲ್ಲಿ ಏಳು ಬಾರಿ ಸ್ಪರ್ಧೆಮಾಡಿ, ಐದು ಬಾರಿ ನನಗೆ ಆಶೀರ್ವಾದಿಸಿದ್ದೀರಿ. ಇನ್ನು ಎರಡು ಬಾರಿ ಸೋತಿದ್ದೇನೆ. ಈಗ ಮತ್ತೊಮ್ಮೆ ನಿಮ್ಮ ಬಳಿ ಬಂದಿದ್ದೇನೆ. ಹಿಂದೆ ಶಾಸಕನಾಗಿ ನಿಮ್ಮ ಬಳಿ ಬಂದಿದ್ದೆ. ಈಗ ಮುಖ್ಯಮಂತ್ರಿಯಾಗಿ ನಿಮ್ಮ ಬಳಿ ಬಂದು ಮತ ಕೇಳುತ್ತಿದ್ದೇನೆ. ನನಗೆ ಈ ಬಾರಿಯೂ ಆಶೀರ್ವದಿಸಿ. ಮತ್ತೆ ಮುಖ್ಯಮಂತ್ರಿಯಾಗಿ ನಿಮ್ಮ ಬಳಿಗೆ ಬರುತ್ತೇನೆ ಎಂದು ಹೇಳಿದರು.

ಮುಖಾಮುಖಿಯಾದ ಕಾಂಗ್ರೆಸ್-ಜೆಡಿಎಸ್: ಅಂತಿಮ ಹಂತದ ಕಸರತ್ತು ನಡೆಸಿದ ಉಭಯ ಪಕ್ಷಗಳ ನಾಯಕರು ರೋಡ್ ಶೋ ನಡೆಸುವ ವೇಳೆ ಮುಖಾಮುಖಿಯಾದ ಘಟನೆ ನಡೆಯಿತು.

ಚಾಮುಂಡೇಶ್ವರಿ ಕ್ಷೇತ್ರದ ಬೋಗಾದಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ರೋಡ್ ಶೋ ನಡೆಸುವ ವೇಳೆ ಪರಸ್ಪರ ಎದುರಾದರು. ಒಂದೇ ರಸ್ತೆಯಲ್ಲಿ ಮುಖಾಮುಖಯಾದ ಕಾರಣ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ತಕ್ಷಣ ಜಾಗೃತರಾದ ಪೊಲೀಸರು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಸ್ಥಳದಿಂದ ಬೇರ್ಪಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಯಲ್ಲಿ ಮಾಜಿ ಶಾಸಕ ಎಂ.ಸತ್ಯನಾರಾಯಣ, ಜಿ.ಪಂ.ಸದಸ್ಯ ರಾಕೇಶ್ ಪಾಪಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಸದಸ್ಯ ಎನ್.ಭಾಸ್ಕರ್, ಕಾಂಗ್ರೆಸ್ ಮುಖಂಡರಾದ ಮರೀಗೌಡ, ಕಡಕೊಳ ನಾಗರಾಜು, ಮಂಜುಳಮಾನಸ, ಶಿವಣ್ಣ, ಶಿವಮಾದು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News