ದಲಿತರು ಕಾಂಗ್ರೆಸ್ ಬೆಂಬಲಿಸುವಂತೆ ಡಾ.ಎಲ್.ಹನುಮಂತಯ್ಯ ಕರೆ
ತುಮಕೂರು,ಮೇ.10: ಕಾಂಗ್ರೆಸ್ ಪಕ್ಷ ಯಾವಾಗಲೂ ದಲಿತರ ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಪರವಾಗಿರುವಂತಹ ಪಕ್ಷವಾಗಿದ್ದು, ಮೇ.12 ರಂದು ನಡೆಯುವ ಮತದಾನದ ವೇಳೆ ದಲಿತರು, ಹಿಂದುಳಿದ ವರ್ಗಗಳ ಜನರು, ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಕರೆ ನೀಡಿದ್ದಾರೆ.
ನಗರದ ಎನ್.ಆರ್.ಕಾಲೋನಿಯಲ್ಲಿ ಕಾಂಗ್ರೆಸ್ ಪಕ್ಷದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತಿದ್ದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ ನಂತರ ಎಲ್ಲಾ ಬಡವರಿಗೂ ಉಚಿತ ಅಕ್ಕಿ ಕೊಡುವಂತಹ ಅನ್ನಭಾಗ್ಯ ಯೋಜನೆ ಜಾರಿ ಮತ್ತು ದಲಿತರ ಸಾಲಮನ್ನಾ, ಆಶ್ರಯ ಮನೆಗಳ ಮೇಲಿನ ಸಾಲಮನ್ನಾ ಮಾಡಿ ನುಡಿದಂತೆ ನಡೆವ ಸರಕಾರ ಎಂದು ನಿರೂಪಿಸಿದರು ಎಂದರು.
ಕೇಂದ್ರದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಎಂದು ಮೋದಿಯವರು ಹೇಳಿ ಬರೀ ಬಾಯಿ ಮಾತಿನಲ್ಲೆ ಜನರಿಗೆ ಹೊಟ್ಟೆ ತುಂಬಿಸುತ್ತಿದ್ದಾರೆ. ಆದರೆ ನಮ್ಮ ಸಿದ್ದರಾಮಯ್ಯ ನವರು ಒಂದನೇ ತರಗತಿಯಿಂದ 30ನೇ ವರ್ಷದವರೆಗೂ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಿ ನಿಜವಾಗಿ ಬೇಟಿ ಬಚಾವೋ ಮಾಡುತ್ತಿದ್ದಾರೆ. ಶೇ25% ಇರುವ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಲ್ಲಿ ಕಳೆದ ಐದು ವರ್ಷಗಳಲ್ಲಿ 80 ಸಾವಿರ ಕೋಟಿಯನ್ನು ಮೀಸಲಿಟ್ಟಿದ್ದಾರೆ. ಇದರ ಭಾಗವಾಗಿ ಎನ್.ಆರ್.ಕಾಲೋನಿ ಕೊಳಚೆ ಪ್ರದೇಶಕ್ಕೆ 5 ಕೋಟಿ ಅನುದಾನ ಖರ್ಚು ಮಾಡಿ ಮಾದರಿ ವಾರ್ಡಾಗಿ ಪರಿವರ್ತಿಸಿದ್ದಾರೆ. ಹಾಗಾಗಿ ನಮ್ಮ ಪರವಾಗಿರುವಂತವರನ್ನು ನಾವು ಬೆಂಬಲಿಸಬೇಕಿದೆ ಎಂದು ಮನವಿ ಮಾಡಿದರು.
ಜೆಡಿಎಸ್‍ನವರಿಗೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಅವರು ಈಗಾಗಲೇ ಕೋಮುವಾದಿ ಪಕ್ಷವಾದ ಬಿಜೆಪಿಯವರ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಸಾಮಾಜಿಕ ನ್ಯಾಯದ ಪರವಾಗಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಿ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ದಲಿತರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಡಾ.ಎಲ್.ಹನುಮಂತಯ್ಯ ಕರೆ ಕೊಟ್ಟರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆಂಚಮಾರಯ್ಯ ಮಾತನಾಡಿ, ಅನ್ನಭಾಗ್ಯ, ಕ್ಷೀರಭಾಗ್ಯ,ಶೂ ಭಾಗ್ಯ, ಹೀಗೆ ಹಲವಾರು ಜನಪರ ಭಾಗ್ಯಗಳನ್ನು ಕೊಟ್ಟ ಕಾಂಗ್ರೆಸ್ ಪಕ್ಷಕ್ಕೆ ದಲಿತ ಬಾಂಧವರು ಮತ ನೀಡಬೇಕೆಂದರು.
ಶಾಸಕರಾದ ರಪೀಕ್ ಅಹಮದ್ ಮಾತನಾಡಿ, ರಸ್ತೆ, ಚರಂಡಿ, ಕುಡಿಯುವ ನೀರು, ಹೀಗೆ ಮೂಲಭೂತ ಸೌಕರ್ಯಗಳಿಗೆ ಐದು ಕೋಟಿ ಅನುದಾನವನ್ನು ನೀಡಿದ್ದೇನೆ. ಕಾಲೋನಿಗೆ ಒಂದು ಶೈಕ್ಷಣಿಕ ಭವನವನ್ನು ಹಾಗೂ ಕುಡಿಯುವ ನೀರಿನ ಘಟಕ ಹಾಗೂ ಗಂಡಸರು ಮತ್ತು ಹೆಂಗಸರಿಗೆ ಒಂದೊಂದು ಪ್ರತ್ಯೇಕ ಶೌಚಾಲಯವನ್ನು ನೀಡಿ ಅಭಿವೃದ್ಧಿ ಕೆಲಸವನ್ನುಮಾಡಿದ್ದೇನೆ. ನಾನು ಮಾಡಿದ ಕೆಲಸಕ್ಕೆ ನಿಮ್ಮ ಬಳಿ ಕೂಲಿ ಕೇಳುತ್ತಿದ್ದೇನೆ. ನನ್ನ ಕೆಲಸವನ್ನು ನೋಡಿ ತಾವುಗಳು ಮತ ನೀಡಬೇಕೆಂದು ಕೇಳಿಕೊಂಡರು.
ರ್ಯಾಲಿಯನ್ನು ಎನ್.ಆರ್.ಕಾಲೋನಿ, ನಿರ್ವಾಣಿ ಲೇಔಟ್, ಆರ್.ವಿ.ಕಾಲೋನಿ, ಭಾಗ್ಯಮಂದಿರ, ಕೋತಿತೋಪು ಮುಖ್ಯರಸ್ತೆಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ನರಸೀಯಪ್ಪ, ಕೆಪಿಸಿಸಿ ಸದಸ್ಯರಾದ ಡಾ.ಸೋಮಶೇಖರ್, ಸ್ಲಂ ಜನಾಂದೋಲನದ ಎ.ನರಸಿಂಹಮೂರ್ತಿ, ಮಾಜಿ ಟೂಡಾ ಸದಸ್ಯ ಜಯಮೂರ್ತಿ, ಕುಮಾರ್ ಮಾದರ್, ಶಾವಾಜ್, ಲತಾ, ಯುವ ಮುಖಂಡರಾದ ಕಿರಣ್, ಕೆಂಪರಾಜ್ ದೊಡ್ಡಟ್ಟಿ, ದಾಸಮಂಜು, ಕಿಶೋರ್, ಹಾಗೂ 19 ಮತ್ತು 20ನೇ ವಾರ್ಡ್‍ನ ದಲಿತರು ಮತ್ತು ಅಲ್ಪಸಂಖ್ಯಾತರು ಉಪಸ್ಥಿತರಿದ್ದರು.