×
Ad

ಮತದಾರರನ್ನು ಓಲೈಸಲು ಕಾಂಗ್ರೆಸ್ ಕೀಳು ರಾಜಕೀಯ: ಸಂಸದೆ ಶೋಭಾ ಕರಂದ್ಲಾಜೆ

Update: 2018-05-10 23:45 IST

ಮೂಡಿಗೆರೆ, ಮೇ 10: ರಾಜ್ಯದಲ್ಲಿ ಭ್ರಷ್ಟಾಚಾರ ನಡೆಸಿರುವ ಕಾಂಗ್ರೆಸ್, ಈಗ ಹಣ ಹಂಚುವ ಮೂಲಕ ಚುನಾವಣೆಗೆ ಹೊರಟಿದೆ. ಮತದಾರರನ್ನು ಓಲೈಸಲು ಕೀಳು ರಾಜಕೀಯ ಮಾಡುತ್ತಿದ್ದಾರೆ. ಆಶೆ, ಆಮಿಷಗಳನ್ನು ಒಡ್ಡತೊಡಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಗುರುವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ವರ್ಷ ಮತದಾರರಿಗೆ 60 ರೂಪಾಯಿ ಸೀರೆ ಕೊಟ್ಟಿದ್ದರು. ಈ ಬಾರಿ ನಕಲಿ ಮೂಗಿನ ನತ್ತು ಕೊಟ್ಟು ಕೀಳುಮಟ್ಟಕ್ಕೆ ಕಾಂಗ್ರೆಸ್ ಇಳಿದಿದೆ. ಹೀಗಾಗಿ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಈಗ ರಾಜ್ಯದಲ್ಲಿ 40 ಸ್ಥಾನ ಗಳಿಸಲೂ ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು. 

ಚುನಾವಣಾ ಆಯೋಗ 79 ಕೋಟಿ ರೂ. ಹಾಗೂ 5.50 ಲಕ್ಷ ಲೀಟರ್ ಮದ್ಯವನ್ನು ವಶಕ್ಕೆ ಪಡೆದಿದೆ. ರಾಜರಾಜೇಶ್ವರಿ ನಗರದಲ್ಲಿ ನಕಲಿ ಮತದಾರ ಚೀಟಿ ನೀಡಿರುವ ಅಕ್ರಮ ಬೆಳಕಿಗೆ ಬಂದಿದೆ. ಬಾಂಗ್ಲಾ ದೇಶೀಯರಿಗೆ, ಹೊರರಾಜ್ಯದಿಂದ ಕೆಲಸ ಅರಸಿ ಬಂದವರಿಗೆಲ್ಲಾ ಓಟರ್ ಐಡಿ ಮಾಡಿಕೊಟ್ಟು ಅಡ್ಡದಾರಿಯಲ್ಲಿ ಚುನಾವಣೆ ಗೆಲ್ಲಲು ಕಾಂಗ್ರೆಸ್ ಮುಂದಾಗಿದೆ ಎಂದು ಆರೋಪಿಸಿದರು.

ಕಾಫಿ ಮತ್ತು ಕಾಳುಮೆಣಸಿಗೆ ಸೂಕ್ತ ಬೆಲೆ ಲಭಿಸುವಂತೆ ಕ್ರಮ ವಹಿಸಿ, ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ. ಬಿಜೆಪಿ ಸರ್ಕಾರ ಬಂದಮೇಲೆ ಕಾಫಿ ಕಾರ್ಮಿಕರು ಹಾಗೂ ಉಡುಪಿ ಭಾಗದ ರಬ್ಬರ್ ಕಾರ್ಮಿಕರಿಗೆ ಅನುಕೂಲವಾಗುವಂತೆ ಇಎಸ್‍ಐ ಆಸ್ಪತ್ರೆ ಸ್ಥಾಪಿಸಲಾಗುವುದು. ಎಂ.ಪಿ.ಕುಮಾರಸ್ವಾಮಿ ಶಾಸಕರಾಗಿದ್ದ ಅವಧಿಯಲ್ಲಿ ಕಳಸ ತಾಲೂಕು ರಚನೆಗಾಗಿ ಪೂರ್ವ ಸಿದ್ಧತೆಗಳು ನಡೆದಿತ್ತು. ಪದವಿ ಕಾಲೇಜು, ಆಸ್ಪತ್ರೆ, ಬಸ್‍ನಿಲ್ದಾಣ, ರಸ್ತೆಗಳ ಉನ್ನತೀಕರಣ ಸಹಿತ ಹಲವು ಅಭಿವೃದ್ಧಿ ಕಾಮಗಾರಿ ನಡೆಸಲಾಗಿತ್ತು. ಆದರೆ ನಂತರ ಬಂದ ಕಾಂಗ್ರೆಸ್ ಸರ್ಕಾರ ತಾಲೂಕು ರಚನೆಗೆ ಇಚ್ಛಾಶಕ್ತಿ ತೋರಲಿಲ್ಲ. ಎಂಎಲ್‍ಸಿ ಮೋಟಮ್ಮ, ಶಾಸಕ ನಿಂಗಯ್ಯ ಇದ್ದರೂ ಕಳಸವನ್ನು ತಾಲೂಕು ಕೇಂದ್ರ ಮಾಡಲು ಪ್ರಯತ್ನಿಸಲಿಲ್ಲ ಎಂದು ಆರೋಪಿಸಿದರು. 

ಮುಖಂಡರಾದ ಅರೇಕೂಡಿಗೆ ಶಿವಣ್ಣ, ಪ್ರಮೋದ್ ದುಂಡುಗ, ಜಯಂತ್, ಜೆ.ಎಸ್.ರಘು, ಕೆಂಜಿಗೆ ಕೇಶವ್, ಚಂದ್ರೇಶ್ ಮಗ್ಗಲಮಕ್ಕಿ, ವಿನೋದ್ ಕಣಚೂರು ಮತ್ತಿತರರು ಇದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News