ಉವೈಸಿ ಜೊತೆ ಜೆಡಿಎಸ್: ಊಸರವಳ್ಳಿ ರಾಜಕಾರಣ

Update: 2018-05-11 04:53 GMT

ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಬಹಿರಂಗ ಪ್ರಚಾರ ಮುಗಿದಿದೆ. ಬಹಿರಂಗ ಪ್ರಚಾರದಲ್ಲಿ ರಾಷ್ಟ್ರಮಟ್ಟದ ನಾಯಕರು ಗುರುತಿಸಿಗೊಂಡರಾದರೂ, ತಮ್ಮ ಪಕ್ಷಗಳಿಗೆ ಯಾಕೆ ಮತ ನೀಡಬೇಕು ಎನ್ನುವುದನ್ನು ವಿವರಿಸುವುದರಲ್ಲಿ ವಿಫಲರಾದರು. ಪ್ರಧಾನಿ ನರೇಂದ್ರ ಮೋದಿಯವರಂತೂ ತನ್ನ ಹುದ್ದೆಯ ಘನತೆಯನ್ನು ಮರೆತು ರಾಜ್ಯಾದ್ಯಂತ ಪ್ರಚಾರಕ್ಕಿಳಿದರು. ತಪ್ಪು ಕನ್ನಡದಲ್ಲಿ ಮಾತನಾಡುತ್ತಾ ಜನರನ್ನು ಓಲೈಸಲು ಯತ್ನಿಸಿದರೇ ಹೊರತು, ಪಕ್ಷದ ಸಾಧನೆಯನ್ನು ಮುಂದಿಟ್ಟು ಮತ ಯಾಚಿಸಲು ಅವರಿಗೂ ಸಾಧ್ಯವಾಗಲಿಲ್ಲ. ಇತ್ತ ಕಾಂಗ್ರೆಸ್ ಪಕ್ಷ ಮೋದಿಗೆ ಪರ್ಯಾಯವಾಗಿ ಸಿದ್ದರಾಮಯ್ಯರನ್ನು ಜನರ ಮುಂದೆ ನಿಲ್ಲಿಸಿತು.

ರಾಜ್ಯದಲ್ಲಿ ಕಾಂಗ್ರೆಸ್ ಮುಖ ಉಳಿಸಿಕೊಂಡಿರುವುದೂ ಸಿದ್ದರಾಮಯ್ಯ ಅವರ ನಿಷ್ಠುರ ಮತ್ತು ಜನಪರ ವ್ಯಕ್ತಿತ್ವದಿಂದಾಗಿದೆ. ರಾಹುಲ್‌ಗಾಂಧಿಯವರೂ ಈ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು. ಮೋದಿಯ ಅಬ್ಬರದ ಮುಂದೆ ರಾಹುಲ್ ಗಾಂಧಿಯ ಸರಳತೆ ಜನರನ್ನು ಒಂದಿಷ್ಟು ಸೆಳೆದದ್ದು ನಿಜ. ಆದರೆ ಅದು ಎಷ್ಟರಮಟ್ಟಿಗೆ ಮತವಾಗಿ ಪರಿವರ್ತನೆಯಾಗುತ್ತದೆ ಎನ್ನುವುದನ್ನು ಊಹಿಸಲಾಗದು. ಉಳಿದಂತೆ ಬಿಜೆಪಿಯ ನಾಯಕರು ಹಿಂದುತ್ವದ ಹೆಸರಿನಲ್ಲೇ ಮತ ಯಾಚಿಸಲು ಯತ್ನಿಸಿದ್ದಾರೆ. ಯಡಿಯೂರಪ್ಪ ಹೆಸರಿಗಷ್ಟೇ ಪ್ರಚಾರದಲ್ಲಿ ಕಾಣಿಸಿಕೊಂಡರು.ತಮ್ಮ ಆಡಳಿತಾವಧಿಯಲ್ಲಿ ನಡೆದ ಭ್ರಷ್ಟಾಚಾರ ಈ ಚುನಾವಣೆಯಲ್ಲೂ ಅವರನ್ನು ಭೂತದಂತೆ ಬೆಂಬತ್ತಿತ್ತು. ನರೇಂದ್ರ ಮೋದಿಯವರು ಪದೇ ಪದೇ ‘‘ಸಿದ್ದ ರೂಪಾಯ್ಯ’’ ಎಂದು ವ್ಯಂಗ್ಯ ಮಾಡುತ್ತಿದ್ದರೆ, ಅದು ಪರೋಕ್ಷವಾಗಿ ಯಡಿಯೂಪ್ಪರನ್ನು ವ್ಯಂಗ್ಯ ಮಾಡಿದಂತೆ ಕೇಳಿಸುತ್ತಿತ್ತು. ಇತ್ತ ಜೆಡಿಎಸ್ ಅರ್ಧ ಆರೆಸ್ಸೆಸ್‌ನ್ನು ಇನ್ನರ್ಧ ಉವೈಸಿಯವರನ್ನು ಬೆನ್ನಿಗೆ ಕಟ್ಟಿಕೊಂಡು ಚುನಾವಣಾ ಪ್ರಚಾರ ನಡೆಸಿತು. ‘‘ಬಹುಮತ ಬಂದರೂ, ಬರದಿದ್ದರೂ ನಾವೇ ಸರಕಾರ ರಚಿಸುವುದು’’ ಎಂಬ ದೇವೇಗೌಡರ ಮಾತಿನ ಅರ್ಥವಾದರೂ ಏನು? ಅಧಿಕಾರ ಹಿಡಿಯುವುದಕ್ಕೆ ಯಾವ ಪಕ್ಷವಾದರೂ ಸರಿ, ನಾವು ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ತಾನೇ?

 ಕಾಂಗ್ರೆಸ್-ಬಿಜೆಪಿಯ ನಡುವೆ ಪರ್ಯಾಯವಾಗಿ ಜನತಾದಳವನ್ನು ಜನರು ಗುರುತಿಸುತ್ತಿದ್ದ ದಿನಗಳಿದ್ದವು. ಆದರೆ ಸದ್ಯದ ಸಂದರ್ಭದಲ್ಲಿ ಜೆಡಿಎಸ್ ಸಮಯ ಸಾಧಕ ಪಕ್ಷವಾಗಿ ತನ್ನ ಸ್ವಂತಿಕೆಯನ್ನು ಸಂಪೂರ್ಣ ಕಳೆದುಕೊಂಡಿದೆ. ಯಾವಾಗ ಅಧಿಕಾರಕ್ಕಾಗಿ ಬಿಜೆಪಿಯ ಜೊತೆಗೆ ಅದು ಸಂಗವನ್ನು ಮಾಡಿಕೊಂಡಿತೋ ಅಲ್ಲಿಂದ, ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವಾಗುವ ಎಲ್ಲ ಅರ್ಹತೆಯನ್ನು ಕಳೆದುಕೊಂಡಿತು. ಇಂದು ಜೆಡಿಎಸ್‌ನ್ನು ಬಿಜೆಪಿ ಪರೋಕ್ಷವಾಗಿ ನಿಯಂತ್ರಿಸುತ್ತಿದೆ ಎಂಬ ಆರೋಪಗಳಿವೆ. ಕಾಂಗ್ರೆಸ್‌ಗೆ ಬೀಳಬಹುದಾದ ಜಾತ್ಯತೀತ ಮತಗಳನ್ನು ಚದುರಿಸುವುದಕ್ಕಾಗಿ ಬಿಜೆಪಿ ಒಳಗೊಳಗೆ ಜೆಡಿಎಸ್‌ನ್ನು ಪೋಷಿಸುತ್ತಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಆರೆಸ್ಸೆಸ್‌ನ್ನು ಬಾಯಿ ತುಂಬ ಹೊಗಳಿದ ಇತಿಹಾಸವೂ ದೇವೇಗೌಡರಿಗಿದೆ. ಒಂದೆಡೆ ದೇವೇಗೌಡರು ‘‘ಬಿಜೆಪಿಯೊಂದಿಗೆ ಮೈತ್ರಿಯಿಲ್ಲ’’ ಎಂದು ಹೇಳಿದರೆ, ಅದಕ್ಕೆ ಭಿನ್ನವಾದ ಹೇಳಿಕೆಯನ್ನು ಕುಮಾರಸ್ವಾಮಿ ನೀಡುತ್ತಾರೆ. ಹಾಗೆಯೇ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ದೇವೇಗೌಡರನ್ನು ಬಾಯಿ ತುಂಬಾ ಹೊಗಳುತ್ತಾರೆ. ಈ ಎಲ್ಲ ಗೊಂದಲಗಳಿಂದಾಗಿ ಜೆಡಿಎಸ್ ಈ ಬಾರಿಯೂ ಅಗತ್ಯಕ್ಕೆ ‘ಬಳಸಿಕೊಳ್ಳ ಬಹುದಾದ ಪಕ್ಷ’ ಎಂದಷ್ಟೇ ಚುನಾವಣೆಯಲ್ಲಿ ಗುರುತಿಸಿಕೊಂಡಿದೆ.

ಇದೇ ಸಂದರ್ಭದಲ್ಲಿ ಅಸದುದ್ದೀನ್ ಉವೈಸಿ ಅವರ ಎಐಎಂಎಂ ಜೆಡಿಎಸ್‌ನ್ನು ಬೆಂಬಲಿಸಿದೆ. ಬಿಜೆಪಿ ಮತ್ತು ಆರೆಸ್ಸೆಸ್ ದೇಶಾದ್ಯಂತ ಯಾವ ರೀತಿ ಧರ್ಮದ ಹೆಸರಲ್ಲಿ ಜನರನ್ನು ಭಾವನಾತ್ಮಕವಾಗಿ ಕೆರಳಿಸುತ್ತಿದೆಯೋ, ಅಂತಹದೇ ಕೆಲಸವನ್ನು ಉವೈಸಿಯವರ ಪಕ್ಷವೂ ಮಾಡಿಕೊಂಡು ಬಂದಿದೆ. ಈ ದೇಶದ ಜಾತ್ಯತೀತ ಮೌಲ್ಯಗಳಿಗೆ ಧಕ್ಕೆ ಬಂದಾಗ ಅದು ಇತರ ಜಾತ್ಯತೀತ ಶಕ್ತಿಗಳೊಂದಿಗೆ ಕೂಡಿಕೊಂಡದ್ದು ಕಡಿಮೆ. ಬದಲಿಗೆ ಬಿಜೆಪಿಗೆ ಲಾಭವಾಗುವಂತಹ ರಾಜಕೀಯ ನಡೆಯನ್ನು ಇಡುತ್ತಾ ಬಂದಿದೆ. ಉತ್ತರ ಪ್ರದೇಶವೂ ಸೇರಿದಂತೆ ವಿವಿಧೆಡೆ ಉವೈಸಿ ಪಕ್ಷಗಳ ಸ್ಪರ್ಧೆ ಹಲವು ವದಂತಿಗಳನ್ನು ಹುಟ್ಟಿಸಿ ಹಾಕಿತ್ತು. ಅದರಲ್ಲಿ ಮುಖ್ಯವಾಗಿ, ಬಿಜೆಪಿ ಮತ್ತು ಉವೈಸಿ ಪಕ್ಷ ಒಳ ಒಪ್ಪಂದ ಮಾಡಿಕೊಂಡಿವೆ ಎನ್ನುವುದು ಒಂದು. ಇದೀಗ ರಾಜ್ಯದಲ್ಲಿ ಜೆಡಿಎಸ್ ಮೇಲೆಯೂ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡ ಆರೋಪವಿದೆ ಮತ್ತು ಅದೇ ಜೆಡಿಎಸ್ ಜೊತೆಗೆ ಉವೈಸಿಯ ಪಕ್ಷ ಗುರುತಿಸಿಕೊಂಡಿದೆ. ಧರ್ಮದ ಹೆಸರಲ್ಲಿ ಜನರನ್ನು ಭಾವನಾತ್ಮಕವಾಗಿ ಶೋಷಿಸುವ ಎಲ್ಲ ಪಕ್ಷಗಳೂ ಒಂದೇ. ಅವುಗಳ ಜೊತೆಗೆ ಜಾತ್ಯತೀತ ಪಕ್ಷಗಳು ತಮ್ಮ ಅಂತರ ಕಾಪಾಡಿಕೊಳ್ಳಬೇಕು. ವಿಪರ್ಯಾಸವೆಂದರೆ, ಬಿಜೆಪಿಯೊಂದಿಗೆ ಸಂಗ ಮಾಡಿ ಜಾತಿ ಕೆಡಿಸಿಕೊಂಡಿರುವ ಜೆಡಿಎಸ್ ಇದೀಗ ಉವೈಸಿಯ ಜೊತೆಗೆ ಸೇರಿ ತನ್ನ ಜಾತ್ಯತೀತತೆಯ ಮಟ್ಟವನ್ನು ಉಜ್ಜಿ ನೋಡಿಕೊಳ್ಳುತ್ತಿದೆ. ಈ ಮೈತ್ರಿ ಅಂತಿಮವಾಗಿ ಯಾರಿಗೆ ಒಳಿತು ಮಾಡುತ್ತದೆ ಎನ್ನುವುದನ್ನು ಊಹಿಸಿದರೆ ಸಾಕು, ಇವರು ಯಾಕಾಗಿ ಮೈತ್ರಿ ಮಾಡಿಕೊಂಡಿದ್ದಾರೆ ಎನ್ನುವುದು ಹೊಳೆದು ಬಿಡುತ್ತದೆ.

ಜೆಡಿಎಸ್ ಈ ಬಾರಿ ಯಡಿಯೂರಪ್ಪರನ್ನು ಗುರಿ ಮಾಡಿ ಪ್ರಚಾರ ಮಾಡಿದ್ದು ಕಡಿಮೆ. ಬದಲಿಗೆ ಸಿದ್ದರಾಮಯ್ಯ ಅವರನ್ನು ಶತ್ರುವೆಂದು ಭಾವಿಸಿ ಕಣಕ್ಕಿಳಿದಿದೆ. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ರಾಜ್ಯದ ಕುರಿತಂತೆ ಕೆಟ್ಟ ಮಾತುಗಳನ್ನಾಡಿದಾಗ ಅದರ ವಿರುದ್ಧ ತಂದೆ ಮಕ್ಕಳು ತುಟಿ ಬಿಚ್ಚಲಿಲ್ಲ. ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಸಂಪೂರ್ಣ ವಿಫಲವಾಗಿರುವ ಆದಿತ್ಯನಾಥ್ ರಾಜ್ಯಕ್ಕೆ ಕಾಲಿಟ್ಟಾಗಲೂ ಜೆಡಿಎಸ್ ವೌನವಾಗಿ ಆತನ ಮಾತುಗಳನ್ನು ಬೆಂಬಲಿಸಿದೆ. ಸದ್ಯಕ್ಕೆ ಜೆಡಿಎಸ್‌ನ ಗುರಿ ಸರಕಾರ ರಚಿಸುವುದಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗದಂತೆ ನೋಡಿಕೊಳ್ಳುವುದು. ಸರಕಾರ ರಚಿಸಲು ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್‌ನಿಂದ ಕನಿಷ್ಠ ಹತ್ತು ಸ್ಥಾನಗಳ ಅಗತ್ಯ ಬಿದ್ದರೂ ಸಾಕು, ಜೆಡಿಎಸ್ ಮೊತ್ತ ಮೊದಲು ಮುಂದಿಡುವ ಬೇಡಿಕೆ ‘‘ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಬಾರದು’’ ಎಂದಾಗಿದೆ. ತನ್ನ ವೈಯಕ್ತಿಕ ಅಜೆಂಡಾಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯರನ್ನು ಸೋಲಿಸಲು ಪಣತೊಟ್ಟಿರುವ ಜೆಡಿಎಸ್, ಸದ್ಯಕ್ಕೆ ಕುಟುಂಬದ ಹಿತಾಸಕ್ತಿ ಹೊರತು ಪಡಿಸಿದ ಯಾವ ರಾಜಕೀಯ ವೌಲ್ಯಗಳನ್ನೂ ಹೊಂದಿಲ್ಲ ಎನ್ನುವುದು ಅದರ ಚುನಾವಣಾ ಪ್ರಚಾರದಿಂದ ಬಯಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದನ್ನು ತಡೆಯುವ ಏಕಮೇವ ಪ್ರಣಾಳಿಕೆಯೊಂದಿಗೆ ಚುನಾವಣೆಯನ್ನು ಎದುರಿಸುತ್ತಿದೆ ಜೆಡಿಎಸ್. ಆದರೆ ಅದು ಅವರ ಕುಟುಂಬದ ಅವಶ್ಯಕತೆ ಮಾತ್ರವೇ ಹೊರತು ಜನರ ಅಗತ್ಯವಲ್ಲ. ಮೂರನೆಯ ಶಕ್ತಿಯಾಗಬಹುದಾಗಿದ್ದ ಜೆಡಿಎಸ್, ತನ್ನ ಶಕ್ತಿಯನ್ನೆಲ್ಲ ಸಿದ್ದರಾಮಯ್ಯ ವಿರೋಧಿ ಹೋರಾಟಕ್ಕೆ ಸೀಮಿತಗೊಳಿಸಿದ ಪರಿಣಾಮವಾಗಿ ಪಕ್ಷಕ್ಕೆ ಈ ಬಾರಿ ನಿರ್ಣಾಯಕ ಪಾತ್ರವಹಿಸಲು ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News