×
Ad

ಮೇ.12 ರಂದು ಮತದಾನ: ಮುಕ್ತ ಚುನಾವಣೆಗೆ ಆಯೋಗದ ಸಕಲ ಸಿದ್ಧತೆ

Update: 2018-05-11 21:27 IST

ಬೆಂಗಳೂರು, ಮೇ 11: ರಾಜ್ಯ ವಿಧಾನಸಭೆಗೆ ನಾಳೆ (ಮೇ 12) ಬೆಳಗ್ಗೆ 7 ಗಂಟೆಯಿಂದ ಸಂಜೆ 6:30ರ ವರೆಗೆ ಮತದಾನ ನಡೆಯಲಿದ್ದು, ಮುಕ್ತ, ನ್ಯಾಯ ಸಮ್ಮತ ಹಾಗೂ ನಿರ್ಭೀತ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ದತೆಯನ್ನು ಕೈಗೊಂಡಿದೆ.

ರಾಜ್ಯದ 224 ಕ್ಷೇತ್ರಗಳ ಪೈಕಿ ಬೆಂಗಳೂರಿನ ಜಯನಗರ, ರಾಜರಾಜೇಶ್ವರಿ ನಗರ ಕ್ಷೇತ್ರಗಳನ್ನು ಹೊರತುಪಡಿಸಿ 222 ಕ್ಷೇತ್ರಗಳಲ್ಲಿ ಮತದಾನಕ್ಕೆ ರಾಜ್ಯಾದ್ಯಂತ 12 ಸಾವಿರಕ್ಕೂ ಅಧಿಕ ಸೂಕ್ಷ್ಮಸೇರಿದಂತೆ ಒಟ್ಟಾರೆ 58 ಸಾವಿರಕ್ಕೂ ಅಧಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಶುಕ್ರವಾರ ರಾತ್ರಿಯೇ 3.65ಲಕ್ಷಕ್ಕೂ ಅಧಿಕ ಚುನಾವಣಾ ಸಿಬ್ಬಂದಿ, 1.4ಲಕ್ಷಕ್ಕೂ ಅಧಿಕ ಮಂದಿ ಅಧಿಕಾರಿಗಳು ಸೇರಿದಂತೆ ಪೊಲೀಸ್ ಭದ್ರತಾ ಸಿಬ್ಬಂದಿ ಈಗಾಗಲೇ ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್ ಸೇರಿದಂತೆ ಚುನಾವಣಾ ಸಾಮಗ್ರಿಗಳೊಂದಿಗೆ ನಿಗದಿತ ಮತಗಟ್ಟೆಗೆ ತೆರಳಿದ್ದು, ಬೆಳಗ್ಗೆ ಮತದಾನಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಿದ್ದಾರೆ.

2.56 ಕೋಟಿ ಪುರುಷರು, 2.50 ಕೋಟಿ ಮಹಿಳೆಯರು, 5,055 ತೃತೀಯ ಲಿಂಗಿಗಳು ಸೇರಿ ಒಟ್ಟು 5.06ಕೋಟಿಗೂ ಅಧಿಕ ಸಂಖ್ಯೆಯ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಸೂಕ್ಷ್ಮಮತಗಟ್ಟೆಗೆ ಓರ್ವ ಹೆಡ್ ಕಾನ್‌ಸ್ಟೆಬಲ್, ಓರ್ವ ಕಾನ್‌ಸ್ಟೆಬಲ್ ಹಾಗೂ ಓರ್ವ ಗೃಹ ರಕ್ಷಕ ದಳದ ಸಿಬ್ಬಂದಿ ಸೇರಿ ಮೂರು ಮಂದಿ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ಇದೇ ಮೊದಲಬಾರಿಗೆ ಮತದಾನದ ಉತ್ತೇಜನಕ್ಕಾಗಿ ಚುನಾವಣಾ ಆಯೋಗ ಮಹಿಳೆಯರು, ಹಿರಿಯ ನಾಗರಿಕರು, ವಿಕಲಚೇತನರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೆ, ಮತ ಕೇಂದ್ರಗಳಲ್ಲಿ ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ ಸೇರಿ ಮೂಲಭೂತ ಸೌಕರ್ಯ ಒದಗಿಸಲು ಆಯೋಗ ಕ್ರಮಕೈಗೊಂಡಿದೆ.
ಕಾಂಗ್ರೆಸಿನ 220, ಬಿಜೆಪಿಯ 222 ಹಾಗೂ ಜೆಡಿಎಸ್ ಹಾಗೂ ಬಿಎಸ್ಪಿ-217 ಸೇರಿದಂತೆ ಒಟ್ಟಾರೆ 2649ಕ್ಕೂ ಅಧಿಕ ಮಂದಿ ಸ್ಪರ್ಧಾಕಣದಲ್ಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಶ್ರೀರಾಮುಲು ಸೇರಿದಂತೆ ಘಟಾನುಘಟಿ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆಯಲಿದ್ದಾರೆ.

ಕೋಲಾರ ಜಿಲ್ಲೆ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು 39 ಮಂದಿ ಅಭ್ಯರ್ಥಿಗಳಿದ್ದು, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಮತ್ತು ಸೇಡಂ ಕ್ಷೇತ್ರಗಳಲ್ಲಿ ಅತೀ ಕಡಿಮೆ (ಕೇವಲ 4 ಮಂದಿ) ಅಭ್ಯರ್ಥಿಗಳು ಸ್ಪರ್ಧಾ ಅಖಾಡದಲ್ಲಿದ್ದು, ತಮ್ಮ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ.

ರಾಜ್ಯದ 23 ಕ್ಷೇತ್ರಗಳಲ್ಲಿ 15ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಆ ಕ್ಷೇತ್ರಗಳಲ್ಲಿ 2 ಇವಿಎಂ ಯೂನಿಟ್, ವಿವಿಪ್ಯಾಟ್ ಅಳವಡಿಸಲಾಗುತ್ತದೆ. ಉಳಿದ ಕ್ಷೇತ್ರಗಳಲ್ಲಿ 1 ಇವಿಎಂ ಯೂನಿಟ್, ವಿವಿಪ್ಯಾಟ್ ಅಳವಡಿಸಲಾಗುತ್ತದೆ ಎಂದು ಆಯೋಗ ತಿಳಿಸಿದೆ.

ತೋರು ಬೆರಳಿಗೆ ಶಾಯಿ: ಈ ಬಾರಿ ಮತದಾನದ ಸಂದರ್ಭದಲ್ಲಿ ಮತದಾರರ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತಿದೆ. ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಆಯೋಗ ಕ್ರಮ ವಹಿಸಿದೆ.

ಈಗಾಗಲೇ ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧಿಸಿದ್ದು, ಮತಗಟ್ಟೆ ಕೇಂದ್ರ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜತೆಗೆ ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ ಸೇರಿ ಐವರು ಸಿಬ್ಬಂದಿ ನೇಮಕ ಮಾಡಲಾಗಿದೆ. 8ರಿಂದ 10ಮತಗಟ್ಟೆ ವ್ಯಾಪ್ತಿಗೆ ಅಧಿಕಾರಿಯೊಬ್ಬರನ್ನು ಉಸ್ತುವಾರಿಗೆ ನೇಮಕ ಮಾಡಲಾಗಿದೆ.

ನಿರ್ಭೀತಿಯಿಂದ ಮತದಾನ ಮಾಡಿ
‘ಚುನಾವಣಾ ಆಯೋಗ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮತದಾರರು ಯಾವುದೇ ಒತ್ತಡ, ಆಮಿಷ ಹಾಗೂ ಆತಂಕಕ್ಕೆ ಒಳಗಾಗದೆ ನಿರ್ಭೀತಿಯಿಂದ ತಮ್ಮ ಹಕ್ಕು ಚಲಾಯಿಸಿ’
-ಸಂಜೀವ್‌ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News