×
Ad

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ: ಎಸ್ಪಿ ಅಣ್ಣಾಮಲೈ

Update: 2018-05-11 22:30 IST

ಚಿಕ್ಕಮಗಳೂರು, ಮೇ 11: ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯನ್ನು ಮುಕ್ತ, ನಿರ್ಭೀತ, ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದರು.

ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 1210 ಮತಗಟ್ಟೆಗಳಲ್ಲಿ 115 ಕ್ರಿಟಿಕಲ್, 216 ವಲ್ನರೆಬಲ್, 834 ಸಾಮಾನ್ಯ, 39 ನಕ್ಸಲ್ ಪ್ರದೇಶ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ 1,200 ಮಂದಿ ಸೈನಿಕರನ್ನೊಳಗೊಂಡ 15 ಕೇಂದ್ರ ಅರೆಸೇನಾಪಡೆ ತುಕಡಿ, 4 ಕೆಎಸ್‍ಆರ್‍ಪಿ ತುಕಡಿ ಮತ್ತು ಓರ್ವ ಪೊಲೀಸ್ ವರಿಷ್ಠಾಧಿಕಾರಿ, ಓರ್ವ ಹೆಚ್ಚುವರಿ ಅಧೀಕ್ಷಕ, ಡಿಎಸ್ಪಿ 5 ಮಂದಿ, ಪಿಐ 18 ಮಂದಿ, ಪಿಎಸೈ  ಎಎಸೈ 196 ಎಚ್‍ಸಿ 293, ಪಿಸಿ 517, ಹೋಂಗಾರ್ಡ್ 660, ಫಾರೆಸ್ಟ್‍ಗಾರ್ಡ್ 29 ಸೇರಿ ಒಟ್ಟು 2,700 ಮಂದಿ ಚುನಾವಣಾ ಪ್ರಕ್ರಿಯೆಯಲ್ಲಿ ರಕ್ಷಣಾ ಕಾರ್ಯಕ್ಕೆ ತೊಡಗಿಸಲಾಗಿದೆ ಎಂದು ಹೇಳಿದರು.

ಈ ಬಾರಿ ವಿಶೇಷವಾಗಿ ಜಿಲ್ಲೆಯ 5 ಮತಗಟ್ಟೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಯನ್ನು ಅದಲು ಬದಲು ಗೊಳಿಸಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಚುನಾವಣಾ ಕರ್ತವ್ಯಕ್ಕೆ ಒಟ್ಟು 91 ವಾಹನಗಳು ಸಂಚರಿಸುತ್ತಿವೆ. ಜಿಲ್ಲೆಯಲ್ಲಿ ಒಟ್ಟು 10 ಚೆಕ್‍ಪೋಸ್ಟ್‍ಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಮತದಾನದ ದಿನವಾದ ಮೇ.12  ಮತ್ತು ಮತ ಎಣಿಕೆ ದಿನವಾದ ಮೇ.14ರ ಮಧ್ಯ ರಾತ್ರಿಯಿಂದ ಮೇ.15ರ ಮಧ್ಯ ರಾತ್ರಿಯವರೆಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯಪಾನ ನಿಷೇಧ ದಿನಗಳೆಂದು ಘೋಷಿಸಲಾಗಿದೆ ಎಂದು ಹೇಳಿದರು. ಮತದಾನದ ದಿನ ಮತ್ತು ಮತ ಎಣಿಕೆಯ ದಿನದಂದು ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 140ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಶಾಂತಿ ಕಾಪಾಡಲು ಕ್ರಿಮಿನಲ್ ಹಿನ್ನೆಲೆಯುಳ್ಳ ಜಿಲ್ಲೆಯ 1150 ಮಂದಿ ಅಸಾಮಿಗಳ ಮೇಲೆ ಮುಂಜಾಗೃತಾ ಕ್ರಮವಾಗಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಅಣ್ಣಾಮಲೈ ಜಿಲ್ಲಾ ವ್ಯಾಪ್ತಿಯ 9121 ಶಸ್ತ್ರಾಸ್ತ್ರಗಳನ್ನು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಶರಣಾಗತಿ ಮಾಡಿಸಿಕೊಳ್ಳಲಾಗಿದೆ. ಅದರಲ್ಲಿ 171 ಮಂದಿ ಶಸ್ತ್ರಾಸ್ತ್ರ ಪರವಾನಗಿದಾರರಿಗೆ - ರಿಯಾಯತಿ ನೀಡಲಾಗಿದೆ ಎಂದು ಹೇಳಿದರು.
39 ನಕ್ಸಲ್ ಪ್ರಭಾವಿತ ಮತಗಟ್ಟೆಗಳಿಗೆ ಹೆಚ್ಚುವರಿ ಭದ್ರತೆ ನೀಡಲಾಗಿದೆ ಹಾಗೂ ಹೆಚ್ಚುವರಿಯಾಗಿ ಫ್ಲೈಯಿಂಗ್‍ಸ್ವ್ಕಾಡ್ ನಿಯೋಜಿಸಲಾಗಿದೆ ಎಂದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News