ಹನೂರು: ಮತದಾರರಿಗೆ ಹಂಚಲು ತಂದ ಚಿನ್ನಾಭರಣ ವಶ
Update: 2018-05-11 22:38 IST
ಹನೂರು,ಮೇ.11: ಕ್ಷೇತ್ರ ವ್ಯಾಪ್ತಿಯ ಸಂದನಪಾಳ್ಯ ಗ್ರಾಮದ ಮನೆಯೊಂದರಲ್ಲಿ ಮಹಿಳಾ ಮತದಾರರಿಗೆ ಹಂಚಲು ಸಂಗ್ರಹಿಸಿದ್ದಾರೆ ಎನ್ನಲಾದ ಮೂಗುತಿಯನ್ನು ಚುನಾವಣಾ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನ ನಿವಾಸಿ ರವಿಕುಮಾರ್ ಎಂಬವರು ಸಂದನಪಾಳ್ಯದ ಸಂದೆಗೋ ಎಂಬವರ ಮನೆಯನ್ನು ಬಾಡಿಗೆ ಪಡೆದು ವಾಸವಾಗಿದ್ದರು. ಇವರು ಜೆಡಿಎಸ್ ಕಾರ್ಯಕರ್ತರಾಗಿದ್ದು, ಮಹಿಳಾ ಮತದಾರರಿಗೆ ಹಂಚಲು ಮನೆಯಲ್ಲಿ ಮೂಗುತಿಯನ್ನು ಸಂಗ್ರಹಿಸಿದ್ದರು ಎನ್ನಲಾಗಿದ್ದು, ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯಾದ ಚುನಾವಣಾ ಫ್ಲೈಯಿಂಗ್ ಸ್ಕ್ಯಾಡ್ ಸ್ವಾಮಿ ಹಾಗೂ ಎಎಸ್‍ಐ ಶಿವನಂಜಪ್ಪ ತಂಡ ಮನೆಯ ಮೇಲೆ ದಾಳಿ ನಡೆಸಿದಾಗ 1.31 ಲಕ್ಷ ರೂ ಮೌಲ್ಯವುಳ್ಳ 524 ಮೂಗುತಿಯನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ರವಿಕುಮಾರ್ ಅವರನ್ನು ಚುನಾವಣಾಧಿಕಾರಿ ವಿಚಾರಣೆಗೊಳಪಡಿಸಿದ್ದು, ಪ್ರಕರಣವನ್ನು ರಾಮಾಪುರ ಪೋಲಿಸರಿಗೆ ಹಸ್ತಾಂತರಿಸಿದ್ದಾರೆ.