×
Ad

ಮಂಡ್ಯ: ಮಳೆ ಬಿರುಗಾಳಿಗೆ ಧರೆಗುರುಳಿದ ಮರ, ವಿದ್ಯುತ್ ಕಂಬಗಳು

Update: 2018-05-11 22:46 IST

ಮಂಡ್ಯ, ಮೇ 11: ರಣ ಬಿಸಲಿಗೆ ಬಳಲಿದ್ದ ಜನತೆ ಮತ್ತು ಬೆಳೆಗಳಿಗೆ ಗುರುವಾರ ತಡರಾತ್ರಿವರೆಗೆ ಸುರಿದ ಮಳೆ ತಂಪರೆದರೆ, ಜತೆಯಲ್ಲಿ ಬೀಸಿದ ಬಿರುಗಾಳಿಗೆ ಮರ, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಯಾವುದೇ ಜೀವ ಹಾನಿಯಾಗಿಲ್ಲ.

ಬಹುತೇಕ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದರೂ ಮಂಡ್ಯದ ಹೊರವಲಯ ಮತ್ತು ಹೊಳಲು ಗ್ರಾಮದ ಹಾಸುಪಾಸಿನಲ್ಲಿ ಮಾತ್ರ ಬಿರುಗಾಳಿಗೆ ಮರಗಳು, ವಿದ್ಯುತ್ ಕಂಬಗಳು ಉರುಳಿದ್ದು, ಕೆಲವು ಮನೆಗಳ ಮೇಲ್ಚಾವಣಿ, ಶೀಟ್‍ಗಳು ಹಾರಿಹೋಗಿವೆ.

ನಗರದ ಹೊರವಲಯದಲ್ಲಿರುವ ಸಂತೆ ಮೈದಾನದಿಂದ ಹೊಳಲು ಗ್ರಾಮಕ್ಕೆ ಹೋಗುವ ರಸ್ತೆಯುದ್ದಕ್ಕೂ ಸುಮಾರು 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ಮರಗಳು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದು, ಮಂಡ್ಯ-ಮೇಲುಕೋಟೆ ಮಾರ್ಗದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.  ವಿದ್ಯುತ್ ಕಂಬ, ಮರಗಳು ರಸ್ತೆಗೆ ಅಡ್ಡಲಾಗಿ ಉರುಳಿದ್ದ ಪರಿಣಾಮ ಮಾರ್ಗದಲ್ಲಿ ದ್ವಿಚಕ್ರ ವಾಹನ ಹೊರತುಪಡಿಸಿ ಇತರೆ ವಾಹನಗಳ ಸಂಚಾರಕ್ಕೆ ತಡೆಯುಂಟಾಯಿತು. ಶುಕ್ರವಾರ ಬೆಳಗ್ಗೆ ಬದಿಗೆ ಸರಿಸಿ ಸಂಚಾರಕ್ಕೆ ಅನುವು ಮಾಡಲಾಯಿತು.

ಹೊಸದಾಗಿ ವಿದ್ಯುತ್ ಕಂಬಗಳನ್ನು ನೆಟ್ಟಿದ್ದರಿಂದ ಮಳೆ ಗಾಳಿಗೆ ಹಲವು ಉರುಳಿ ಬಿದ್ದಿವೆ. ಆದರೆ, ಯಾವುದೇ ಅವಘಡ ನಡೆದಿಲ್ಲ. ಶುಕ್ರವಾರ ಸಂಜೆಯೊಳಗೆ ಎಲ್ಲಾ ಕಂಬಗಳನ್ನು ಸರಿಪರಿಸಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ.
ಹೊಳಲು ಗ್ರಾಮದ ಹೊರವಲಯದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಚುನಾವಣೆ ಹಿನ್ನೆಲೆಯಲ್ಲಿ ಬೀಗಮುದ್ರೆ ಹಾಕಲಾಗಿತ್ತು. ಅದರೆ, ಬಿರುಗಾಳಿಗೆ ಬಾರ್ ನ ಮೇಲ್ಚಾವಣಿಗೆ ಹಾರಿ ಪಕ್ಕದ ಭತ್ತದ ಗದ್ದೆಗೆ ಬಿದ್ದಿವೆ. ಮರಗಳು ಉರುಳಿಬಿದ್ದು ಭತ್ತ, ರಾಗಿ, ಇತರ ಬೆಳೆಗಳಿಗೆ ಸ್ವಲ್ಪ ಹಾನಿಯಾಗಿದೆ.

ಕಾರ್ನೇಶಿಯಾ ಬೆಳೆ ನಾಶ: ಮಂಡ್ಯ ನಗರದ ಸಂತೆಮಾಳ ಬಳಿಯ ಎಂ.ಜಿ.ನಂದೀಶ್‍ಕುಮಾರ್ ಹಾಗೂ ಎಂ.ಜಿ.ಉಮೇಶ್‍ಕುಮಾರ್ ಸಹೋದರರಿಗೆ ಸೇರಿರುವ ಕಾರ್ನೇಶಿಯಾ ಬೆಳೆಗೆ ಹಾಕಲಾಗಿದ್ದ ಪಾಲಿಹೌಸ್ ಮಳೆಗೆ ಮುರಿದು ಬಿದಿದ್ದು, ಕಾರ್ನೇಶಿಯಾ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.

ನಂದೀಶ್‍ಕುಮಾರ್ ಗೆ ಸೇರಿದ 1 ಎಕರೆ ಹಾಗೂ ಉಮೇಶ್‍ಕುಮಾರ್ ಗೆ ಸೇರಿದ ಅರ್ಧ ಎಕರೆ ಸೇರಿದಂತೆ ಸುಮಾರು ಒಂದೂವರೆ ಎಕರೆ ಜಮೀನಿನಲ್ಲಿ ಕಳೆದ 1 ತಿಂಗಳ ಹಿಂದೆ ಬ್ಯಾಂಕ್‍ನಲ್ಲಿ ಸಾಲ ಪಡೆದು ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಪಾಲಿಹೌಸ್ ನಿರ್ಮಿಸಿ ಕಾರ್ನೇಶಿಯಾ ಹೂವಿನ ಬೆಳೆ ಹಾಕಲಾಗಿತ್ತು.  ಇನ್ನೇನು ಒಂದು ವಾರದಲ್ಲಿ ಬೆಳೆ ಕೈಗೆ ಬರುವುದರಲ್ಲಿತ್ತು. ಆದರೆ, ಗುರುವಾರ ರಾತ್ರಿ 7 ಗಂಟೆ ಸಮಯದಲ್ಲಿ ಬಿರುಗಾಳಿ ಸಹಿತ ಸುರಿತ ಮಳೆಗೆ ಸಂಪೂರ್ಣವಾಗಿ ಪಾಲಿಹೌಸ್‍ನ ಮುರಿದು ಬೆಳೆ ಮೇಲೆ ಬಿದ್ದು ಬೆಳೆ ನಷ್ಟವಾಗಿದೆ. ಸಂಬಂಧಪಟ್ಟ ಇಲಾಖೆಯಿಂದ ಪರಿಹಾರ ಕೊಡಬೇಕು ಎಂದು ಬೆಳೆಗಾರರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News