300 ರೂ. ಶುಲ್ಕ ಬಾಕಿಗೆ ಹಾಲ್ ಟಿಕೆಟ್ ನಿರಾಕರಿಸಿದ ಕಾಲೇಜು: ಹೃದಯಾಘಾತದಿಂದ ವಿದ್ಯಾರ್ಥಿ ಮೃತ್ಯು
ಸತ್ನಾ,ಮೇ.12 : ಕಾಲೇಜು ಶುಲ್ಕವನ್ನು ಸಂಪೂರ್ಣವಾಗಿ ಪಾವತಿಸದ 20 ವರ್ಷದ ವಿದ್ಯಾರ್ಥಿಗೆ ಹಾಲ್ ಟಿಕೆಟ್ ನಿರಾಕರಿಸಿದ ಮರುದಿನ ಆತ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಸತ್ನಾದಿಂದ ವರದಿಯಾಗಿದೆ.
ಮೋಹನಲಾಲ್ ಎಂಬ ಹೆಸರಿನ ವಿದ್ಯಾರ್ಥಿ ಸತ್ನಾದ ರಾಮಕೃಷ್ಣ ಕಾಲೇಜಿನಲ್ಲಿ ಕಂಪ್ಯೂಟರ್ ಪದವಿ ತರಗತಿಯಲ್ಲಿ ಕಲಿಯುತ್ತಿದ್ದು ಆತ ಕಾಲೇಜು ಶುಲ್ಕವಾದ ರೂ. 25,700 ಪಾವತಿಸಿದ್ದರೂ ಬಾಕಿ ರೂ. 300 ಪಾವತಿಸದೇ ಇದ್ದ ಕಾರಣ ಆತನಿಗೆ ಹಾಲ್ ಟಿಕೆಟ್ ನೀಡಲಾಗಿರಲಿಲ್ಲ. ಇದರಿಂದ ತೀವ್ರ ಮನನೊಂದಿದ್ದ ಆತ ತನ್ನ ಭವಿಷ್ಯವೇ ಹಾಳಾಯಿತು ಎಂದುಕೊಂಡಿದ್ದ ಎಂದು ಸಂಬಂಧಿಕರೊಬ್ಬರು ಹೇಳಿದ್ದಾರೆ.
ಆತ ಹೃದಯಾಘಾತದಿಂದ ಸಾವಿಗೀಡಾದ ಸುದ್ದಿ ತಿಳಿಯುತ್ತಲೇ ಕೇವಲ ಮುನ್ನೂರು ರೂಪಾಯಿಗಾಗಿ ಆತನಿಗೆ ಪರೀಕ್ಷೆಗೆ ಹಾಜರಾಗಲು ಅನುಮತಿ ನಿರಾಕರಿಸಿದ ಕಾಲೇಜಿನ ವಿರುದ್ಧ ಆತನ ಸಂಬಂಧಿಕರು ಹಾಗೂ ನೆರೆಹೊರೆಯವರು ತಮ್ಮ ಆಕ್ರೋಶ ತೋಡಿಕೊಂಡರಲ್ಲದೆ ರಸ್ತೆ ತಡೆ ಕೂಡ ನಡೆಸಿ ಕಾಲೇಜಿನ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿದರು. ತಮ್ಮ ಬೇಡಿಕೆ ಈಡೇರುವ ತನಕ ಪ್ರತಿಭಟನೆ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.