×
Ad

ಹಲವು ವಿಶಿಷ್ಟ ಘಟನೆಗಳಿಗೆ ಸಾಕ್ಷಿಯಾದ ರಾಜ್ಯ ವಿಧಾನಸಭಾ ಚುನಾವಣೆ

Update: 2018-05-12 18:37 IST

ಬೆಂಗಳೂರು, ಮೇ 12: ವಿಧಾನಸಭಾ ಚುನಾವಣೆಗೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾಗನೂರ ಗ್ರಾಮದ ಸೋಮಣ್ಣ ಎಂಬವರ ಮನೆಯಲ್ಲಿ ಸಾವು ಸಂಭವಿಸಿದ್ದರೂ, ದುಖಃದ ನಡುವೆ ಮತಗಟ್ಟೆಗೆ ಬಂದು ಕುಟುಂಬ ಸದಸ್ಯರು ಮತದಾನ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಮೊದಲ ಮತ-ಹಾಲುಮತ: ವಿಜಯಪುರ ಜಿಲ್ಲೆ ಬಹುತೇಕ ಮತಗಟ್ಟೆಗಳಲ್ಲಿ ಶುಭ ಸೂಚಕವೆಂಬ ‘ನಂಬಿಕೆ’ಯಿಂದ ಹಾಲುಮತ (ಕುರುಬ) ಸಮಾಜದವರಿಂದ ಮೊದಲಿಗೆ ಮತದಾನ ಮಾಡಿಸಿದ್ದು, ಮೊದಲು ಕುರುಬ ಸಮಾಜದವರು ಮತ ಚಲಾಯಿಸಿದ ಬಳಿಕ ಇತರೆ ಮತದಾರರು ಮತದಾನ ಮಾಡಿದರು.

ಆಸ್ಪತ್ರೆಯಿಂದ ಮತಗಟ್ಟೆಗೆ: ಆಸ್ಪತ್ರೆಯಿಂದ ಬಿಡುಗಡೆ(ಡಿಸ್ಚಾರ್ಜ್)ಆದ ಶಿವರಾಮ್ ಎಂಬವರು ನೇರವಾಗಿ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮಂಗಳೂರು ಕ್ಷೇತ್ರದ ಬೋಳಿಯಾರಿನ ಮತಗಟ್ಟೆ ಕೇಂದ್ರ 97ರಲ್ಲಿ ಶಿವರಾಮ್ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಬಿಡುಗಡೆಯಾದ ತಕ್ಷಣ ಹೋಗಿ ಮತ ಚಲಾವಣೆ ಮಾಡಿ ಮಾದರಿಯಾಗಿದ್ದಾರೆ.

ಮತ ಚಲಾಯಿಸಿ ಮೃತಪಟ್ಟ: ಮಂಡ್ಯ ಜಿಲ್ಲೆ ವಡ್ಡರಹಳ್ಳಿ ಗ್ರಾಮದ ತಿಮ್ಮೇಗೌಡ ಮತಕೇಂದ್ರದಿಂದ ಮನೆಗೆ ವಾಪಸ್ಸಾದ ತಕ್ಷಣ ಮೃತಪಟ್ಟಿದ್ದಾರೆ. ಪಾಂಡವಪುರ ತಾಲೂಕಿನ ವಡ್ಡರಹಳ್ಳಿ ಗ್ರಾಮದ 55 ವರ್ಷದ ತಿಮ್ಮೇಗೌಡ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೂ ತಮ್ಮ ಹಕ್ಕು ಚಲಾಯಿಸಿ, ಮನೆಗೆ ವಾಪಸ್ಸಾದ ಕೂಡಲೇ ಅಸುನೀಗಿದ್ದಾರೆ ಎಂದು ಗೊತ್ತಾಗಿದೆ.

ತೃತೀಯ ಲಿಂಗಿಗಳಿಂದ ಹಕ್ಕು ಚಲಾವಣೆ: ಬೆಂಗಳೂರಿನ ಸಿ.ವಿ.ರಾಮನ್ ನಗರ ಕ್ಷೇತ್ರ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ನಗರದ ಮಿಲಾಗ್ರಿಸ್ ಮತಗಟ್ಟೆಗಳಲ್ಲಿ ಮಂಗಳಮುಖಿಯರು ಮೊದಲಬಾರಿಗೆ ಹಕ್ಕು ಚಲಾಯಿಸಿದ್ದು, ವಿಶೇಷವಾಗಿತ್ತು.

ಅಜ್ಜಿ ಹೇಳಿದ್ದು ‘ಕೈ’ಗೆ ಮೊಮ್ಮಗ ಹಾಕಿದ್ದೇ ಬೇರೆ: ಮಂಡ್ಯ ಜಿಲ್ಲೆ ಮದ್ದೂರಿನ ಸಾದೊಳಲು ಗ್ರಾಮದಲ್ಲಿ ಅಜ್ಜಿಯ ಸಹಾಯಕ್ಕೆಂದು ಬಂದ ಮೊಮ್ಮಗ ಕಾಂಗ್ರೆಸ್ ಬದಲು ಜೆಡಿಎಸ್‌ಗೆ ಮತ ಚಲಾಯಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಫೋಟೋ ವೈರಲ್: ರಾಜ್ಯದ ವಿವಿಧೆಡೆಗಳಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿದ ಮತದಾರರ ಫೋಟೋಗಳು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಹಾಕಿದ ಮತದಾರರು ಚುನಾವಣಾ ಸಿಬ್ಬಂದಿ ಕಣ್ತಪ್ಪಿಸಿ ಮೊಬೈಲ್ ಮೂಲಕ ಫೋಟೋ ತೆಗೆದು ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಹರಿಯಬಿಟ್ಟಿದ್ದು, ಮತದಾನದ ಗೌಪ್ಯತೆ ಕಾಪಾಡಿಲ್ಲ ಎಂಬ ಆಕ್ಷೇಪಗಳು ಕೇಳಿಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News