ರಾಜ್ಯದ ಹಲವೆಡೆ ಮತದಾನಕ್ಕೆ ಅಡ್ಡಿಯಾದ ಮಳೆರಾಯ

Update: 2018-05-12 14:39 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 12: ರಾಜ್ಯಾದ್ಯಂತ ಶನಿವಾರ ವಿಧಾನಸಭೆಗೆ ಮತದಾನ ನಡೆದಿದ್ದು, ಎಲ್ಲಡೆ ಬಹುತೇಕ ಶಾಂತಿಯುತ ಮತದಾನವಾಗಿದೆ. ಇದರ ಮಧ್ಯೆ ಹುಬ್ಬಳ್ಳಿ, ಬೀದರ್, ಗದಗ, ಕಲಬುರಗಿ, ರಾಯಚೂರು ಸೇರಿ ಹಲವೆಡೆ ಗುಡುಗು, ಗಾಳಿ ಸಹಿತ ಮಳೆ ಬಿದ್ದಿದ್ದರಿಂದ ಮತದಾನ ಕೆಲ ಹೊತ್ತು ಮಂದಗತಿಯಲ್ಲಿ ಸಾಗಿತು.

ಹುಬ್ಬಳ್ಳಿ ಸುತ್ತಮುತ್ತ ಗುಡುಗು, ಸಿಡಿಲು ಸಹಿತ ಆಲಿಕಲ್ಲಿನ ಭಾರೀ ಮಳೆಯಾಗಿದ್ದರಿಂದ ಕೆಲ ಹೊತ್ತು ಮತಗಟ್ಟೆಗಳು ಮತದಾರರಿಲ್ಲದೇ ಖಾಲಿ ಹೊಡೆದವು. ಬೀದರ್‌ನಲ್ಲೂ ಮಳೆ ಸುರಿದಿದ್ದರಿಂದ ಇಲ್ಲಿನ ಬಸವಕಲ್ಯಾಣ, ಹಮನಾಬಾದ್, ಬೀದರ್ ನಗರ ಸೇರಿ ಹಲವೆಡೆ ವರುಣನ ಆರ್ಭಟ ಹೆಚ್ಚಾಗಿತ್ತು. ಗುಡುಗು, ಗಾಳಿ ಸಮೇತ ಮಳೆ ಬಿದ್ದಿದ್ದರಿಂದ ಮತದಾನಕ್ಕೆ ಅಡ್ಡಿಯಾಗಿತ್ತು.

ಇನ್ನು ಗದಗದಲ್ಲೂ ಮಳೆರಾಯ ಅಬ್ಬರಿಸಿದ್ದರಿಂದ ಮತದಾನಕ್ಕೆ ಅಡ್ಡಿಯಾಗಿತ್ತು. ಗದಗ ಜಿಲ್ಲೆಯ ಮುಂಡರಗಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆರಾಯನ ಅಬ್ಬರ ಜೋರಾಗಿತ್ತು. ಮತಗಟ್ಟೆಗಳೂ ಖಾಲಿ ಹೊಡೆಯುತ್ತಿದ್ದವು.

ಇದರ ಮಧ್ಯೆ ಬಿಸಿಲಿನಿಂದ ಬೆಂದಿದ್ದ ಕಲಬುರಗಿ ಜಿಲ್ಲೆಯಲ್ಲೂ ಮಳೆರಾಯ ಅಬ್ಬರಿಸಿದ್ದು, ಜಿಲ್ಲೆಯ ಬಹುತೇಕ ಕಡೆಯಲ್ಲಿ ಬಿರುಗಾಳಿ, ಗುಡುಗು, ಸಿಡಿಲು ಸಮೇತ ಮಳೆಯಾಗಿದೆ. ಬಿಸಿಲಿಗೆ ಹೆದರಿ ಸಾಯಂಕಾಲ ಮತದಾನ ಮಾಡಲು ಮುಂದಾಗಿದ್ದ ಮತದಾರರಿಗೆ ಮಳೆ ಅಡ್ಡಿಯಾಗಿತ್ತು.

ರಾಯಚೂರಿನಲ್ಲೂ ಮಳೆಯಾಗಿದ್ದರಿಂದ ಮತದಾರರು ಮನೆಯಲ್ಲಿ ಬಾಕಿಯಾಗಿದ್ದು, ಬಳಿಕೆ ಮತ ಚಲಾಯಿಸಿದ್ದಾರೆ. ಮಾನವಿ ತಾಲೂಕಿನ ಕವಿತಾಳ ಸೇರಿ ವಿವಿಧ ಹಳ್ಳಿಗಳಲ್ಲಿ ಮಳೆ ಸುರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News