ಮೂಲ ಸೌಕರ್ಯಕ್ಕೆ ಆಗ್ರಹಿಸಿ ಹಲವು ಕಡೆ ‘ಮತದಾನ ಬಹಿಷ್ಕಾರ’
ಬೆಂಗಳೂರು, ಮೇ 12: ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ರಾಜ್ಯದ ವಿವಿಧೆಡೆಗಳಲ್ಲಿ ಮತದಾರರು ಮತದಾನ ಬಹಿಷ್ಕಾರ ಮಾಡಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕೃಷ್ಣಾ ನದಿ ನಡುಗಡ್ಡೆ ಕಡದರಗಡ್ಡೆಯ ಸಾರ್ವಜನಿಕರು ಮತದಾನ ಬಹಿಷ್ಕಾರ ಮಾಡಿದ್ದರು. ಆ ಹಿನ್ನೆಲೆಯಲ್ಲಿ ತಹಸೀಲ್ದಾರ್ ಭಗವಾನ್, ಗ್ರಾಮಸ್ಥರ ಮನವೊಲಿಕೆ ಸ್ಥಳಕ್ಕೆ ತೆರಳಿದ್ದರು. ಆ ಬಳಿಕ ಗ್ರಾಮ ಪಂಚಾಯತ್ ನ ಮೂವರು ಸಿಬ್ಬಂದಿಗಳು ಹಕ್ಕು ಚಲಾಯಿಸಿದರು. ಆದರೆ, ಗ್ರಾ.ಪಂ. ಸಿಬ್ಬಂದಿ ಮತ ಚಲಾಯಿಸಿದ್ದರಿಂದ ಗ್ರಾಮಸ್ಥರು ರೊಚ್ಚಿಗೆದ್ದು ಬೆಳಗ್ಗೆ 9ಗಂಟೆಯ ಸುಮಾರಿಗೆ ತಹಸೀಲ್ದಾರ್‌ಗೆ ಘೇರಾವ್ ಹಾಕಿದ್ದಾರೆ. ಮಧ್ಯಾಹ್ನ 12 ಗಂಟೆಯಾದರೂ ಅದೇ ಪರಿಸ್ಥಿತಿ ಮುಂದುವರಿದಿದೆ. ರಸ್ತೆಗೆ ಮುಳ್ಳಿನ ಬೇಲಿ ಹಾಕಿ, ಸಂಚಾರ ಸ್ಥಗಿತಗೊಳಿಸಿದ್ದಾರೆ.
ಗ್ರಾಮಸ್ಥರ ನಿರ್ಧಾರದ ವಿರುದ್ಧ ಹೇಗೆ ಮತದಾನ ಮಾಡಿಸಿದ್ದೀರಿ? ನದಿಗೆ ಸೇತುವೆ ನಿರ್ಮಾಣದ ಬೇಡಿಕೆ ಬಗ್ಗೆ ಅನೇಕ ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದರೂ ಅಧಿಕಾರಿಗಳು ಇದಕ್ಕೆ ಸ್ಪಂದಿಸಿಲ್ಲ ಎಂದು ಜನರು ವಾಗ್ವಾದ ನಡೆಸಿದ್ದಾರೆ. ಆ ಬಳಿಕ ತಹಸೀಲ್ದಾರ್, ಪೊಲೀಸ್ ಭದ್ರತೆಯಲ್ಲಿ ಹಿಂದಿರುಗಿದ್ದಾರೆ ಎಂದು ಗೊತ್ತಾಗಿದೆ.
ಮೈಸೂರಿನ ಹರಿನಹಳ್ಳಿಗೆ ಜನಪ್ರತಿನಿಧಿಗಳು ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿ ಸ್ಥಳೀಯರು ಮತದಾನ ಬಹಿಷ್ಕರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಗುಡಿಬಂಡೆ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಹುಲ್ಲೂಡು ಪಂಚಾಯತ್ ನ ರೂರಲ್ ಗುಡಿಬಂಡೆ ಮತಗಟ್ಟೆ ಸಂಖ್ಯೆ-229ರಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ. ಗ್ರಾಮಕ್ಕೆ ಜನಪ್ರತಿನಿಧಿಗಳು ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ.
ಚುನಾವಣೆ ಬಂದಾಗಷ್ಟೇ ಜನಪ್ರತಿನಿಧಿಗಳು ಕೈಕಾಲು ಹಿಡಿಯುತ್ತಾರೆ. ಗೆದ್ದ ಮೇಲೆ ಈ ಕಡೆ ತಲೆನೇ ಹಾಕುವುದಿಲ್ಲ. ಹೀಗಾಗಿ ಈ ಬಾರಿ ನಾವು ಮತದಾನವನ್ನು ಬಹಿಷ್ಕರಿಸಿದ್ದೇವೆ ಎಂದು ಹುಲ್ಲೂಡು ಗ್ರಾಮಸ್ಥರು ಮತದಾನ ಮಾಡದೆ ತಮ್ಮ ಆಕ್ರೋಶ ಹೊರಹಾಕಿದರು.