ಬಾದಾಮಿ, ಚಾಮುಂಡೇಶ್ವರಿ ಫಲಿತಾಂಶದತ್ತ ರಾಜ್ಯದ ಜನರ ಚಿತ್ತ

Update: 2018-05-12 15:13 GMT

ಬೆಂಗಳೂರು, ಮೇ 12: ತೀವ್ರ ಪ್ರತಿಷ್ಠೆಯ ಬಾದಾಮಿ, ಚಾಮುಂಡೇಶ್ವರಿ, ವರುಣಾ, ಶಿಕಾರಿಪುರ, ರಾಮನಗರ, ಚನ್ನಪಟ್ಟಣ, ಕೊರಟಗೆರೆ, ಮೊಳಕಾಲ್ಮೂರು ಹಾಗೂ ಹೊಳೆನರಸೀಪುರ ಕ್ಷೇತ್ರಗಳಲ್ಲಿ ಯಾರು ಜಯ ಗಳಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿಯ ಶ್ರೀರಾಮುಲು ಮತ್ತು ಜೆಡಿಎಸ್‌ನ ಜಿ.ಟಿ.ದೇವೇಗೌಡ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಉಭಯ ಕ್ಷೇತ್ರಗಳ ಮತದಾರರು ತಮ್ಮ ನಾಯಕರೇ ಗೆಲ್ಲಲಿದ್ದಾರೆಂಬ ಉಮೇದಿನಲ್ಲಿದ್ದಾರೆ.

ಅತ್ತ ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಾಗೂ ಶ್ರೀರಾಮುಲು ಗೆಲುವಿಗೆ ಮತದಾರರು ಪಣತೊಟ್ಟವರಂತೆ ಅತ್ಯಂತ ಉತ್ಸಾಹದಿಂದ ಹಕ್ಕು ಚಲಾಯಿಸಿದ್ದಾರೆ. ಈ ಮಧ್ಯೆ ಇತ್ತ ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೂ ಸಿದ್ದರಾಮಯ್ಯ ಮತ್ತು ಜಿ.ಟಿ. ದೇವೇಗೌಡ ತೀವ್ರ ಹಣಾಹಣಿ ಏರ್ಪಟ್ಟಿದೆ.

ವರುಣಾ ಕ್ಷೇತ್ರದಲ್ಲಿ ಸಿಎಂ ಪುತ್ರ ಡಾ.ಯತೀಂದ್ರ ಹಾಗೂ ಬಿಜೆಪಿ ಅಭ್ಯರ್ಥಿ ಟಿ.ಬಸವರಾಜು, ಶ್ರೀಕಾರಿಪುರ-ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಕೈ ಅಭ್ಯರ್ಥಿ ಜಿ.ಬಿ.ಮಾಲತೇಶ್, ರಾಮನಗರದಲ್ಲಿ ಕಾಂಗ್ರೆಸ್ ಪಕ್ಷದ ಎಚ್.ಎ.ಇಕ್ಬಾಲ್ ಹುಸೇನ್ ಮತ್ತು ಜೆಡಿಎಸ್‌ನ ಕುಮಾರಸ್ವಾಮಿ ಮಧ್ಯೆ ಸ್ಪರ್ಧೆ ಇದೆ.

ಚನ್ನಪಟ್ಟಣದಲ್ಲಿ ಬಿಜೆಪಿಯ ಸಿ.ಪಿ.ಯೋಗೇಶ್ವರ್, ಕಾಂಗ್ರೆಸಿನ ಎಚ್.ಎಂ.ರೇವಣ್ಣ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕೊರಟಗೆರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಜೆಡಿಎಸ್‌ನ ಸುಧಾಕರ್ ಲಾಲ್ ಮಧ್ಯೆ ಸ್ಪರ್ಧೆ ಇದ್ದು, ಯಾರು ಗೆಲ್ಲಲಿದ್ದಾರೆಂಬುದು ಯಕ್ಷ ಪ್ರಶ್ನೆಯಾಗಿದೆ.

ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿಯ ಶ್ರೀರಾಮುಲು ಮತ್ತು ಪಕ್ಷೇತರ ಅಭ್ಯರ್ಥಿ, ಹಾಲಿ ಶಾಸಕ ತಿಪ್ಪೇಸ್ವಾಮಿ ಮಧ್ಯೆ ಹಾಗೂ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಎಚ್.ಡಿ.ರೇವಣ್ಣ ಮತ್ತು ಕಾಂಗ್ರೆಸ್‌ನ ಮಂಜೇಗೌಡ ನಡುವೆ ತುರುಸಿನ ಸ್ಪರ್ಧೆಯಿದ್ದು, ಮೇಲ್ಕಂಡ ಕ್ಷೇತ್ರಗಳ ಫಲಿತಾಂಶ ರಾಜ್ಯದಲ್ಲಿ ನಿರ್ಣಾಯಕವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News