×
Ad

ಮಂಡ್ಯದ ಎಲ್ಲಾ ಕ್ಷೇತ್ರಗಳಲ್ಲೂ ಈ ಪಕ್ಷ ಗೆಲ್ಲಲಿದೆ ಎಂದ ಅಂಬರೀಶ್ !

Update: 2018-05-12 22:02 IST

ಮಂಡ್ಯ, ಮೇ 12: ಜಿಲ್ಲೆಯ ಏಳು ವಿಧಾಸನಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸುವ ಸೂಚನೆಯಿದೆ ಎಂದು ಮಾಜಿ ಸಚಿವ ಅಂಬರೀಶ್ ಅಭಿಪ್ರಾಯಪಟ್ಟಿದ್ದಾರೆ.

ಮದ್ದೂರು ವಿಧಾನಸಭಾ ಕ್ಷೇತ್ರದ ತನ್ನ ಗ್ರಾಮ ದೊಡ್ಡರಸಿನಕೆರೆ ಗ್ರಾಮದಲ್ಲಿ ಮತ ಚಲಾಯಿಸಿದ ನಂತರ, ಶಾಸಕ ಡಿ.ಸಿ.ತಮ್ಮಣ್ಣ ಪುತ್ರ ಸಂತೋಷ್ ಮನೆಯಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡಿದರು. 'ನನ್ನನ್ನು ಸಚಿವ ಸ್ಥಾನದಿಂದ ಕೈಬಿಟ್ಟಂದಿನಿಂದಲೂ ಕಾಂಗ್ರೆಸ್ ಮೇಲೆ ವಿರೋಧ ಭಾವನೆಯನ್ನೇ ನನ್ನ ಅಭಿಮಾನಿಗಳು ಹೊಂದಿದ್ದಾರೆ. ಸಿದ್ದರಾಮಯ್ಯ ಅವರು ಸ್ಪರ್ಧಿಸಿರುವ ಎರಡೂ ಕಡೆಗಳಲ್ಲಿ ತೀವ್ರ ಪೈಪೋಟಿ ಇರುವುದರಿಂದ ಸಿದ್ದರಾಮಯ್ಯರ ಭವಿಷ್ಯ ಏನಾಗುತ್ತದೆ ಎಂಬುವುದು ಮೇ 15ರ ಬಳಿಕ ಬಹಿರಂಗಗೊಳ್ಳಲಿದೆ ಎಂದರು.

ನನ್ನ ಹೆಂಡತಿ ಮಕ್ಕಳನ್ನು ರಾಜಕೀಯವಾಗಿ ನಿಲ್ಲಿಸಿ ಬೆಳೆಸುವ ಅಗತ್ಯ ನನಗಿಲ್ಲ. ಅವರನ್ನು ಬೇರೆ ಕ್ಷೇತ್ರದಲ್ಲೇ ಬೆಳೆಸುತ್ತೇನೆ. ನಾನು ನನ್ನ ಜನರನ್ನು ಬೆಳೆಸುತ್ತೇನೆ. ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದಿದರೂ ಮಂಡ್ಯದ ಜನರ ಜೊತೆ ನಿರಂತರ ಸಂಪರ್ಕದಲ್ಲಿರುತ್ತೇನೆ ಎಂದು ಅವರು ಹೇಳಿದರು.

ಹೊಸಬರು, ಯುವಕರು ಇದ್ದಾರೆ. ಅವರೆಲ್ಲಾ ಬೆಳೆಯಲಿ. ಒಳ್ಳೆಯ ಕೆಲಸಗಳನ್ನು ಮಾಡಲಿ. ನನ್ನ ಶಕ್ತಿ ಮೀರಿ ಕೆಲಸ ಮಾಡಿದ್ದು, ಜನತೆ ಅಷ್ಟೇ ಬೆಂಬಲ ತೋರಿಸಿದ್ದಾರೆ. ಇವತ್ತಿಗೂ ಅದೇ ಪ್ರೀತಿ-ವಿಶ್ವಾಸವನ್ನು ನನ್ನ ಮೇಲಿಟ್ಟಿದ್ದಾರೆ. ಮಂಡ್ಯಕ್ಕೆ ಸದಾ ಬರುತ್ತಿರುತ್ತೇನೆ ಎಂದು ಅವರು ತಿಳಿಸಿದರು.

ಈ ವೇಳೆ ಡಿ.ಸಿ.ತಮ್ಮಣ್ಣ, ಸಂತೋಷ್ ತಮ್ಮಣ್ಣ, ಕವಿತಾ ಸಂತೋಷ್ ಹಾಗೂ ಶೃತಿ ರಾಜೇಶ್‍ಗೌಡ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News