ದಲಿತರಿಗೆ ಸಿಎಂ ಹುದ್ದೆ ಬಿಟ್ಟು ಕೊಡಲು ಸಿದ್ದ: ಸಿಎಂ ಸಿದ್ದರಾಮಯ್ಯ

Update: 2018-05-13 06:39 GMT

ಮೈಸೂರು, ಮೇ 13: ಹೈಕಮಾಂಡ್ ಹೇಳಿದರೆ ದಲಿತರಿಗೆ ಮುಖ್ಯ ಮಂತ್ರಿ ಹುದ್ದೆ ಬಿಟ್ಟು ಕೊಡಲು  ತಾನು ಸಿದ್ದ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ ಹೈಕಮಾಂಡ್ ದಲಿತರನ್ನು ಸಿಎಂ ಮಾಡುವ ನಿರ್ಧಾರ ಕೈಗೊಂಡರೆ. ಆ ನಿರ್ಧಾರಕ್ಕೆ ನಾನು ಬದ್ಧ. ಹೈಕಮಾಂಡ್ ದಲಿತರನ್ನು ಮುಖ್ಯ ಮಂತ್ರಿ ಮಾಡುವುದಿದ್ದರೆ ಮಾಡಲಿ. ನನ್ನದೇನು ಆಕ್ಷೇಪ ಇಲ್ಲ’’ ಎಂದು ಹೇಳಿದರು.  

ಕಳೆದ ಬಾರಿ ಅವಿರೋಧವಾಗಿ ಮುಖ್ಯ ಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿದ್ದೆ. 2013, ಮೇ 13ರಂದು ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಇಂದಿಗೆ ಐದು ವರ್ಷಗಳನ್ನು ಪೂರ್ಣಗೊಳಿಸಿದ್ದೇನೆ. ಯಾವುದೇ ಕಪ್ಪುಚುಕ್ಕೆ ಇಲ್ಲದೆ ಆಡಳಿತ ನಡೆಸಿದ್ದೇನೆ.  ಈ ಬಾರಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಗೆ 120ಕ್ಕೂ ಅಧಿಕ ಸ್ಥಾನಗಳು ದೊರೆಯಲಿದೆ. ನಾನು ಎರಡೂ ಕ್ಷೇತ್ರಗಳಲ್ಲೂ ಗೆಲ್ಲುತ್ತೇನೆ. ಮತ್ತೆ ಮುಖ್ಯ ಮಂತ್ರಿಯಾಗುತ್ತೇನೆ ” ಎಂದರು.

 ಚುನಾವಣಾ ರಾಜಕೀಯ ಸಾಕು. ಆದರೆ ಸಕ್ರೀಯ ರಾಜಕೀಯದಲ್ಲಿರುತ್ತೇನೆ. ಮುಂದೆ ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ . ಬ್ರಹ್ಮ ಬಂದು ಹೇಳಿದ್ರೂ ಚುನಾವಣೆಗೆ ನಿಲ್ಲುವುದಿಲ್ಲ. ಪಕ್ಷದಲ್ಲಿದ್ದುಕೊಂಡು ಸಲಹೆ ಸೂಚನೆಗಳು ನೀಡುತ್ತಾ ಮುಂದುವರಿಯುವೆ ಎಂದು ಸ್ಪಷ್ಟಪಡಿಸಿದರು.

ಸಿಎಂ ಆಗಿ ಪಲಾಯನವಾದ ಮಾಡಬಾರದು. ತಪ್ಪು ಸಂದೇಶ ರವಾನೆಯಾಗಬಾರದೆಂಬ  ಉದ್ದೇಶಕ್ಕಾಗಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಚುನಾವಣೆ ಮುಗಿದಿದೆ. ಯಾರನ್ನು ಟೀಕಿಸುವುದಿಲ್ಲ. ಬಿಎಸ್ ವೈ,  ಎಚ್ ಡಿಕೆ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ನಿರಂತರ ಚುನಾವಣಾ ಪ್ರಚಾರದಿಂದ ಬಳಲಿದ್ದೇನೆ. ಇಂದು ನಾಳೆ ಎಲ್ಲೂ ಹೋಗುವುದಿಲ್ಲ. ಸಂಪೂರ್ಣ  ವಿಶ್ರಾಂತಿ ಪಡೆಯುವುದಾಗಿ ತಿಳಿಸಿದರು.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News