ನಗರ ಪ್ರದೇಶದಲ್ಲಿ ನೀರಸ ಮತದಾನ ಒಳ್ಳೆಯ ಬೆಳವಣಿಗೆಯಲ್ಲ: ಕುಮಾರ್ ಬಂಗಾರಪ್ಪ
ಸೊರಬ, ಮೇ 13: ಅಬ್ಬರದ ಪ್ರಚಾರದ ನಡುವೆಯೂ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನೀರಸ ಮತದಾನವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಳ್ಳೆಯ ಬೆಳವಣಿಯಲ್ಲ. ಆದರೂ ಗ್ರಾಮೀಣ ಭಾಗದಲ್ಲಿ ಉತ್ತಮ ಮತದಾನವಾಗಿರುವುದು ಸಂತಸದ ವಿಚಾರ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ರವಿವಾರ ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೊರಬ ಕ್ಷೇತ್ರದಲ್ಲೂ ಶೇ.84.14 ಮತದಾನವಾಗಿದೆ ಎಂದರು.
ನಗರ ಪ್ರದೇಶಗಳಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ಮತ್ತು ಪತ್ರಿಕಾ ಮಾಧ್ಯಮ ಹಾಗೂ ವಿವಿಧ ಜಾಲತಾಣಗಳ ಮೂಲಕ ಮತದಾನ ಮಾಡುವಂತೆ ಚುನಾವಣಾ ಆಯೋಗ ಮತ್ತು ವಿವಿಧ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸಿದ್ದರೂ ನಗರ ವಾಸಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೇ ಇರುವುದು ಬೇಸರದ ವಿಚಾರ. ಗ್ರಾಮೀಣ ಭಾಗಗಳಲ್ಲಿ ನಗರ ಪ್ರದೇಶಕ್ಕಿಂತ ಸಾರಿಗೆ ವ್ಯವಸ್ಥೆ ಕಡಿಮೆ ಇದ್ದರೂ ಚುನಾವಣೆಯನ್ನು ಹಬ್ಬದಂತೆ ಸಂಭ್ರಮಿಸಿ, ಅತೀ ಹೆಚ್ಚು ಮತದಾನ ಮಾಡಿದ್ದು, ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡುವಲ್ಲಿ ಒಳ್ಳೆಯ ಬೆಳವಣಿಗೆ. ಅತೀ ಹೆಚ್ಚು ತೆರಿಗೆ ಪಾವತಿಸುವವರು ನಗರ ಪ್ರದೇಶದವರಾದರೂ, ತಮ್ಮ ಹಕ್ಕು ಚಲಾವಣೆಗೆ ಮುಂದಾಗದಿರುವುದು ವಿಪರ್ಯಾಸ. ತಮ್ಮ ಮನಸ್ಥಿತಿಗೆ ಒಗ್ಗದ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇದ್ದರೆ, ನೋಟಾ ಚಲಾವಣೆ ಮೂಲಕ ಅರ್ಹ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಬಹುದಿತ್ತು ಎಂದವರು ಅಭಿಪ್ರಾಯಿಸಿದರು.
ಸೊರಬ ಕ್ಷೇತ್ರದಲ್ಲಿ ಬಿಜೆಪಿ ಎಲ್ಲ ಮೋರ್ಚಾ ಹಾಗೂ ಪದಾಧಿಕಾರಿಗಳು ಉತ್ತಮ ಕಾರ್ಯನಿರ್ವಹಿಸಿ, ಅತೀ ಹೆಚ್ಚು ಮತಗಳನ್ನು ತಂದುಕೊಡುವಲ್ಲಿ ಶ್ರಮವಹಿಸಿದ್ದಾರೆ. ಕ್ಷೇತ್ರದಲ್ಲಿ ಪಕ್ಷಕ್ಕೆ ಅತೀ ಹೆಚ್ಚು ಮತ ಹರಿದು ಬರುವ ಮೂಲಕ ತಮ್ಮ ಆಯ್ಕೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಎ.ಎಲ್.ಅರವಿಂದ್, ಸಂಚಾಲಕ ದಿವಾಕರ್ ಬಾವೆ, ಪ್ರಮುಖರಾದ ಗಜಾನನ ರಾವ್ ಉಳವಿ, ಡಿ.ಶಿವಯೋಗಿ, ನಿರಂಜನ್ ಕುಪ್ಪಗಡ್ಡೆ, ದೇವೇಂದ್ರಪ್ಪ ಮಾವಲಿ, ರಾಜು ಕೆಂಚಿಕೊಪ್ಪ, ಗುರುಪ್ರಸನ್ನ ಗೌಡ ಬಾಸೂರು, ಉಮೇಶ ಗೌಡ ಚಿಕ್ಕಾವಲಿ, ಎಂ.ಡಿ.ಉಮೇಶ್, ಸೈಯದ್ ನಝೀರ್, ಚಂದ್ರಪ್ಪ ಮತ್ತಿತರು ಹಾಜರಿದ್ದರು.