ಕೊಡಗಿನಲ್ಲಿ ಶೇ.74.95 ರಷ್ಟು ಮತದಾನ: ಮತ ಎಣಿಕೆಗೆ ಜಿಲ್ಲಾಡಳಿತದಿಂದ ಸಿದ್ಧತೆ
ಮಡಿಕೇರಿ,ಮೇ.13: ಕೊಡಗು ಜಿಲ್ಲೆಯಲ್ಲಿ ಮೇ, 12 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ.74.95 ರಷ್ಟು ಮತದಾನವಾಗಿದೆ.
ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಶೇ.77.56 ರಷ್ಟು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 72.34 ರಷ್ಟು ಮತದಾನವಾಗಿದೆ.
ಜಿಲ್ಲೆಯಲ್ಲಿ ಒಟ್ಟು 4,33,846 ಮಂದಿ ಮತದಾರರಲ್ಲಿ 2,16,112 ಮಂದಿ ಪುರುಷರು ಮತ್ತು 2,17,717 ಮಂದಿ ಮಹಿಳಾ ಮತದಾರರು, ಹಾಗೂ 17 ಮಂದಿ ಇತರೆ ಮತದಾರರು ಇದ್ದು, ಇವರಲ್ಲಿ 1,62,455 ಮಂದಿ ಪುರುಷರು ಮತ್ತು 1,62,718 ಮಂದಿ ಮಹಿಳಾ ಮತದಾರರು ಹಾಗೂ ಇತರೆ ಒಬ್ಬ ಮತದಾರರು ಸೇರಿದಂತೆ ಒಟ್ಟು 3,25,174 ಮಂದಿ ಮತದಾರರು ಮತ ಹಕ್ಕು ಚಲಾಯಿಸಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,16,937 ಮಂದಿ ಮತದಾರರಲ್ಲಿ 1,07,532 ಮಂದಿ ಪುರುಷರು ಮತ್ತು 1,09,399 ಮಂದಿ ಮಹಿಳಾ ಮತದಾರರು ಹಾಗೂ 6 ಮಂದಿ ಇತರೆ ಮತದಾರರು ಇದ್ದು, ಇವರಲ್ಲಿ 83,402 ಮಂದಿ ಪುರುಷರು ಮತ್ತು 84,857 ಮಂದಿ ಮಹಿಳಾ ಮತದಾರರು ಸೇರಿದಂತೆ ಒಟ್ಟು 1,68,259 ಮಂದಿ ಮತ ಹಕ್ಕು ಚಲಾಯಿಸಿದ್ದಾರೆ.
ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,16,909 ಮಂದಿ ಮತದಾರರಲ್ಲಿ 1,08,580 ಮಂದಿ ಪುರುಷರು ಮತ್ತು 1,08,318 ಮಂದಿ ಮಹಿಳಾ ಮತದಾರರು ಹಾಗೂ 11 ಮಂದಿ ಇತರೆ ಮತದಾರರಿದ್ದು, ಇವರಲ್ಲಿ 79,053 ಪುರುಷರು ಮತ್ತು 77,861 ಮಂದಿ ಮಹಿಳಾ ಮತದಾರರು ಹಾಗೂ ಒಬ್ಬ ಇತರೆ ಮತದಾರರು ಸೇರಿದಂತೆ ಒಟ್ಟು 1,56,915 ಮಂದಿ ಮತದಾರರು ಮತದಾನ ಮಾಡಿದ್ದಾರೆ.
ಮೇ 15 ರಂದು ಮತ ಎಣಿಕೆ: ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಮೇ 15 ರಂದು ನಗರದ ಸಂತ ಜೋಸೆಫರ ಶಾಲೆಯಲ್ಲಿ ನಡೆಯಲಿದ್ದು, ಜಿಲ್ಲಾಡಳಿತವು ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮೇ 15 ರಂದು ಬೆಳಗ್ಗೆ 7 ಗಂಟೆಗೆ ಎಲ್ಲಾ ಮತ ಎಣಿಕೆ ಸಿಬ್ಬಂದಿಗಳು ಮತ ಎಣಿಕೆ ಕೇಂದ್ರಕ್ಕೆ ತಲುಪಲಿದ್ದು, ಅಭ್ಯರ್ಥಿಗಳು ಹಾಗೂ ಮತ ಎಣಿಕೆ ಏಜೆಂಟರು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಲಿದ್ದಾರೆ. ಬೆಳಗ್ಗೆ 7.45 ಗಂಟೆಗೆ ಹಾಜರಿದ್ದವರ ಸಮ್ಮುಖದಲ್ಲಿ ಮತಯಂತ್ರಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮ್ ಬೀಗ ತೆಗೆದು ಎಣಿಕೆ ಟೇಬಲ್‍ಗಳಿಗೆ ರವಾನಿಸಲಾಗುತ್ತದೆ. ಬೆಳಗ್ಗೆ 8 ಗಂಟೆಗೆ ಸರಿಯಾಗಿ ಮತ ಎಣಿಕೆ ಆರಂಭವಾಗಲಿದೆ.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಮತ ಎಣಿಕೆ ಟೇಬಲ್‍ಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಮತ ಎಣಿಕೆ ಟೇಬಲ್‍ಗೆ ಒಬ್ಬರು ಮೇಲ್ವಿಚಾರಕ ಅಧಿಕಾರಿ ಮತ್ತು ಸಹಾಯಕ ಮೇಲ್ವಿಚಾರಕ ಅಧಿಕಾರಿ, ಮೈಕ್ರೋ ವೀಕ್ಷಕರಾಗಿ ಒಬ್ಬರು ಹಾಗೂ ಪ್ರತಿ ಅಭ್ಯರ್ಥಿ ಅಥವಾ ಏಜೆಂಟರಿಗೆ ಅವಕಾಶ ಕಲ್ಪಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಸಿಪಿಎಂಎಫ್ ಭದ್ರತೆ ಒದಗಿಸಲಾಗಿದ್ದು, ಮೊಬೈಲ್ ಪೋನ್‍ನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಮತ ಎಣಿಕೆ ಕೇಂದ್ರದ ಸಮೀಪದಲ್ಲಿ ಮಾಧ್ಯಮ ಕೇಂದ್ರ ತೆರೆಯಲಾಗಿದ್ದು, ರಾಷ್ಟ್ರೀಯ ಮಾಹಿತಿ ಕೇಂದ್ರದ(ಎನ್‍ಐಸಿ) ಸಾಫ್ಟ್ ವೇರ್ ಮೂಲಕ ಕಾಲಕಾಲಕ್ಕೆ ಮಾಹಿತಿ ಒದಗಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.
ಚುನಾವಣಾ ಸಾಮಾನ್ಯ ವೀಕ್ಷಕರಾದ ಟಿ.ಶ್ರೀಕಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್, ಚುನಾವಣಾಧಿಕಾರಿಗಳಾದ ರಮೇಶ್ ಕೊನರೆಡ್ಡಿ, ರಾಜು, ತಹಶೀಲ್ದಾರರು ಇತರರು ಮತ ಎಣಿಕೆ ಸಿದ್ಧತೆ ಬಗ್ಗೆ ಪರಿಶೀಲನೆ ಮಾಡಿದರು.
ನಿಷೇಧಾಜ್ಞೆ ಜಾರಿ: ವಿಜಯೋತ್ಸವಕ್ಕೆ ನಿರ್ಬಂಧ
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮೇ 15 ರಂದು ನಗರದ ಸೆಂಟ್ ಜೋಸೆಫ್ ಶಾಲೆಯಲ್ಲಿ ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆ ಮತ ಎಣಿಕೆಯ ನಂತರ ವಿಜಯಿ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆ, ಸಭೆ ಮತ್ತು ಇತರೆ ಕಾರ್ಯಕ್ರಮಗಳನ್ನು ನಡೆಸಿದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗವಾಗುವ ಸಾಧ್ಯತೆಗಳು ಇರುವುದರಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮೇ 14 ರ ಮಧ್ಯರಾತ್ರಿ 12 ರಿಂದ ಮೇ 15 ರ ಮಧ್ಯರಾತ್ರಿ 12 ಗಂಟೆ ವರೆಗೆ ಕೊಡಗು ಜಿಲ್ಲೆಯಾದ್ಯಂತ ಕಲಂ 144ರಡಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯಾದ ಪಿ.ಐ.ಶ್ರೀವಿದ್ಯಾ ಅವರು ಆದೇಶ ಹೊರಡಿಸಿದ್ದಾರೆ.
ನಿಷೇದಾಜ್ಞೆ ಅವಧಿಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆ, ರಾಜಕೀಯ ಸಭೆ-ಸಮಾರಂಭ, ವಾಹನ ಜಾಥ/ರ್ಯಾಲಿ ಮತ್ತಿತರ ಯಾವುದೇ ರೀತಿಯ ಚಟುವಟಿಕೆ ನಡೆಸುವುದು, ಸ್ಪೋಟಕ/ದಹನ ವಸ್ತುಗಳು, ಮಾರಕ ಆಯುಧಗಳನ್ನು ಹೊಂದಿರುವುದು ಅಥವಾ ಹಿಡಿದು ಓಡಾಡುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಮತ ಎಣಿಕಾ ಕೇಂದ್ರವಾದ ನಗರದ ಸಂತ ಜೋಸೆಫರ ಶಾಲೆಯ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವು ಸಂಪೂರ್ಣ ನಿರ್ಬಂಧಿತ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಖಾಸಗಿ ವಾಹನಗಳ ತಂಗುವಿಕೆ, ಧ್ವನಿವರ್ಧಕ ಬಳಕೆಯನ್ನು ಸಹ ನಿಷೇಧಿಸಲಾಗಿದೆ.
ಈ ಆದೇಶವು ಸರ್ಕಾರಿ ಕರ್ತವ್ಯದ ನಿಮಿತ್ತ, ಬ್ಯಾಂಕ್/ಎ.ಟಿ.ಎಂ. ಭದ್ರತಾ ಸಿಬ್ಬಂದಿಗಳು ಹಾಗೂ ಮತ ಎಣಿಕಾ ಕೇಂದ್ರದ ಭದ್ರತಾ ವ್ಯವಸ್ಥೆಗಾಗಿ ನಿಯೋಜಿಸಲ್ಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳು ಆಯುಧ/ಬಂದೂಕುಗಳನ್ನು ಹೊಂದಿರುವುದಕ್ಕೆ ಅಥವಾ ಬಳಸುವುದಕ್ಕೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅವರು ತಿಳಿಸಿದ್ದಾರೆ.