×
Ad

ಮಡಿಕೇರಿ: ತೋಟದ ಕಾರ್ಮಿಕನಿಗೆ ಕೊಲೆ ಬೆದರಿಕೆ ಆರೋಪ; ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯಿಂದ ದೂರು

Update: 2018-05-13 17:54 IST

ಮಡಿಕೇರಿ,ಮೇ.13: ಆದಿವಾಸಿ ಜನಾಂಗಕ್ಕೆ ಸೇರಿದ ಕುಟ್ಟಂದಿ ಗ್ರಾಮದ ನಿವಾಸಿ ವೈ.ಸಿ.ಅಪ್ಪು ಎಂಬುವವರ ಮೇಲೆ ತೋಟದ ಮಾಲಿಕರೊಬ್ಬರಿಂದ ಹಲ್ಲೆಯಾಗಿದ್ದು, ದೂರು ನೀಡಿದ ಕಾರಣಕ್ಕಾಗಿ ಮಾಲಿಕರು ಕೊಲೆ ಬೆದರಿಕೆವೊಡ್ಡುತ್ತಿದ್ದಾರೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಕಾರ್ಯದರ್ಶಿ ವೈ.ಕೆ.ಗಣೇಶ್ ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಕೊಲೆ ಬೆದರಿಕೆವೊಡ್ಡಿರುವ ಮಾಲಿಕರ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಮಿತಿ ಮೂಲಕ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಪೊನ್ನಂಪೇಟೆಯ ಕುಂದ ಗ್ರಾಮದಲ್ಲಿ ಲೈನ್ ಮನೆಯಲ್ಲಿ ವಾಸವಾಗಿದ್ದ ವೈ.ಸಿ.ಅಪ್ಪು ಅವರು ಕಳೆದ ಎರಡು ವರ್ಷಗಳಿಂದ ತೋಟದ ಕಾರ್ಮಿಕರಾಗಿ ದುಡಿಯುತ್ತಿದ್ದರು. ತೋಟದ ಮಾಲೀಕರು ಕನಿಷ್ಟ ವೇತನವನ್ನು ನೀಡದೆ ಕೇವಲ ರೂ.150 ನೀಡಿ ವಂಚಿಸಿದ್ದಾರೆ. ಅಲ್ಲದೆ ಪಡೆದ ಸಾಲ ರೂ.30 ಸಾವಿರಕ್ಕೆ 20 ಸಾವಿರ ರೂ. ಸೇರಿಸಿ 50 ಸಾವಿರ ರೂ. ಸಾಲವಿದೆ ಎಂದು ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಿದ್ದಾರೆ.

ಜೀತ ಪದ್ದತಿಯಿಂದ ಮುಕ್ತಿ ಪಡೆಯಬೇಕೆಂದು ಅಪ್ಪು ಅವರು ಲೈನ್ ಮನೆಯನ್ನು ತೊರೆಯಲು ಮುಂದಾದಾಗ ಹೋಗಬಾರದೆಂದು ತಡೆದು ಕೈ ಕಾಲು, ಸೊಂಟಕ್ಕೆ ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ಅಪ್ಪು ಅವರನ್ನು ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಹಲ್ಲೆ ನಡೆದ ಬಗ್ಗೆ ಗೋಣಿಕೊಪ್ಪ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ ಪ್ರಭಾವಕ್ಕೆ ಮಣಿದ ಆಸ್ಪತ್ರೆ ಸಿಬ್ಬಂದಿ ಅಪ್ಪು ಅವರನ್ನು ಅದೇ ದಿನ ಆಸ್ಪತ್ರೆಯಿಂದ ಮನೆಗೆ ಕಳುಹಿಸಿದ್ದಾರೆ. ಇದೀಗ ಗಾಯದ ನೋವಿನ ತೀವ್ರತೆಯಿಂದ ಬಳಲುತ್ತಿರುವ ಅಪ್ಪು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಲ್ಲೆ ಮಾಡಿದ ಮಾಲಿಕ ದೂರನ್ನು ವಾಪಾಸ್ ಪಡೆಯುವಂತೆ ಅಪ್ಪು ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ದೂರು ವಾಪಾಸ್ ಪಡೆಯದಿದ್ದಲ್ಲಿ ದೂರು ನೀಡಿದ ಅಪ್ಪು ಅವರ ಸಹೋದರ ರಾಜು ಅವರಿಗೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅಪ್ಪು ಹಾಗೂ ರಾಜು ಇಬ್ಬರಿಗೂ ಮಾಲಿಕರಿಂದ ಜೀವ ಬೆದರಿಕೆ ಇದ್ದು, ಭಯಭೀತರಾಗಿದ್ದಾರೆ ಎಂದು ಗಣೇಶ್ ಆರೋಪಿಸಿದ್ದಾರೆ. 

ದುರ್ಬಲರಾದ ಇವರಿಬ್ಬರಿಗೆ ಮತ್ತು ಇವರ ಕುಟುಂಬ ವರ್ಗಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ ಜೀತ ಪದ್ದತಿ ಮೂಲಕ ಅಪ್ಪು ಅವರನ್ನು ವಂಚಿಸಿರುವ ಮಾಲಿಕರಿಗೆ ಕಾನೂನಿನ್ವಯ ಕಠಿಣ ಶಿಕ್ಷೆ ವಿಧಿಸಬೇಕೆಂದು ಗಣೇಶ್ ಒತ್ತಾಯಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News