×
Ad

ಚಿಕ್ಕಮಗಳೂರು: ಮತ ಎಣಿಕೆ ಪ್ರಕ್ರಿಯೆಗೆ ಸಿದ್ಧವಾದ ಎಸ್‍ಟಿಜೆ ಕಾಲೇಜ್

Update: 2018-05-13 19:12 IST

ಚಿಕ್ಕಮಗಳೂರು, ಮೇ 13: ರಾಜ್ಯ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಜಿಲ್ಲೆಯಾದ್ಯಂತ ವಿವಿಧ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ, ಆರೋಪ, ಪ್ರತ್ಯಾರೋಪ ಸೇರಿದಂತೆ ಎಲ್ಲ ರೀತಿಯ ಚುನಾವಣಾ ಆರ್ಭಟಕ್ಕೆ ಶನಿವಾರ ನಡೆದ ಮತದಾನ ಪ್ರಕ್ರಿಯೆಯಿಂದಾಗಿ ತೆರೆಬಿದ್ದಿದ್ದು, ಸದ್ಯ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರಲ್ಲಿ ತಮ್ಮತಮ್ಮ ಕ್ಷೇತ್ರಗಳಲ್ಲಿ ಜಯಗಳಿಸುವವರ್ಯಾರು ಎಂಬ ಕುತೂಹಲ ಮಾತ್ರ ಉಳಿದಿದೆ. ಈ ಕುತೂಹಲ ತಣಿಯಲು ಒಂದು ದಿನ ಮಾತ್ರ ಬಾಕಿ ಇದ್ದು, ಶನಿವಾರ ನಡೆದ ಮತದಾನದ ನಂತರ ಐದೂ ಕ್ಷೇತ್ರಗಳ 1210 ಮತಗಟ್ಟೆಗಳ ಇವಿಎಂಗಳು ರವಿವಾರ ಬೆಳಗ್ಗೆ ನಗರದ ಎಸ್‍ಟಿಜೆ ಕಾಲೇಜಿನ ಸ್ಟ್ರಾಂಗ್ ರೂಮ್‍ನಲ್ಲಿ ಭದ್ರಗೊಂಡಿವೆ.

ಶನಿವಾರ ಸಂಜೆ 6ಕ್ಕೆ ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ವಿವಿಧ 1210 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಮತಗಟ್ಟೆಯ ಅಧಿಕಾರಿಗಳು ಇವಿಎಂಗಳನ್ನು ಬಿಗಿ ಭದ್ರತೆಯಲ್ಲಿ ಸರಕಾರಿ ಬಸ್‍ಗಳು ಹಾಗೂ ಚುನಾವಣಾ ಕೆಲಸಕ್ಕೆ ನೇಮಿಸಿದ್ದ ವಾಹನಗಳಲ್ಲಿ ಕ್ಷೇತ್ರಗಳ ತಾಲೂಕು ಕೇಂದ್ರಗಳಿಗೆ ರವಾನಿಸಿದ್ದರು. ರವಿವಾರ ಬೆಳಗ್ಗೆ 1210 ಮತಯಂತ್ರಗಳನ್ನು ನಗರದ ಎಸ್‍ಟಿಜೆ ಕಾಲೇಜಿಗೆ ಸರಕಾರಿ ಬಸ್ ಹಾಗೂ ವಿವಿಧ ವಾಹನಗಳ ಮೂಲಕ ಬಿಗಿ ಭದ್ರತೆಯಲ್ಲಿ ಸಾಗಣೆ ಮಾಡಿ ಚುನಾವಣಾಧಿಕಾರಿಗಳ ಸೂಚನೆಯಂತೆ ನಿಗದಿತ ಸ್ಟ್ರಾಂಗ್ ರೂಮ್‍ಗಳಲ್ಲಿ ಸಂಗ್ರಹಿಸಿಡಲಾಗಿದೆ.

ಮೇ 15ರಂದು ಬೆಳಗ್ಗೆಯಿಂದಲೇ ಮತ ಎಣಿಕೆ ಆರಂಭವಾಗುವ ಹಿನ್ನೆಲೆಯಲ್ಲಿ ಎಸ್‍ಟಿಜೆ ಕಾಲೇಜಿನ ವಿವಿಧ ಕೊಠಡಿಗಳಲ್ಲಿ ಮತ ಎಣಿಕೆಗೆ ಅಗತ್ಯ ಸಿದ್ಧತೆಗಳನ್ನು ಚುನಾವಣಾಧಿಕಾರಿಗಳು ಈ ಮೊದಲೇ ಮಾಡಿದ್ದಾರೆ. ಇವಿಎಂಗಳಲ್ಲಿ ಮತ ಎಣಿಕೆ ಮಾಡುವ ಅಧಿಕಾರಿಗಳಿಗೆ ಹಾಗೂ ರಾಜಕೀಯ ಪಕ್ಷಗಳ ಬೂತ್ ಎಜೆಂಟ್‍ಗಳಿಗೆ ಮತ ಎಣಿಕೆ ವೀಕ್ಷಿಸಲು ಕಾಲೇಜಿನ ವಿವಿಧ ಕೊಠಡಿಗಳಲ್ಲಿ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಸಕಲ ಸಿದ್ಧತೆ ಮಾಡಲಾಗಿದೆ.

ಮೇ 15ರಂದು ಮತ ಎಣಿಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಇವಿಎಂ ಸಂಗ್ರಹಿಸಿಡಲಾಗಿರುವ ಸ್ಟ್ರಾಂಗ್ ರೂಮ್‍ಗಳಿಗೆ ಭಾರೀ ಬಿಗಿ ಭದ್ರೆತಯನ್ನು ಜಿಲ್ಲಾಡಳಿತ ಒದಗಿಸಿದೆ. ಮಂಗಳವಾರ ಬೆಳಗ್ಗೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭವಾಗುವುದರಿಂದ ಕಾಲೇಜಿನ ಒಳ ಹಾಗೂ ಹೊರ ಭಾಗಗಲ್ಲಿ ಅಗತ್ಯ ಪೊಲೀಸರು ಹಾಗೂ ಅರೆಸೇನಾ ಪಡೆ ತುಕಡಿಗಳ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಮತ ಎಣಿಕೆ ಹಿನ್ನೆಲೆಯಲ್ಲಿ ಐದೂ ಕ್ಷೇತ್ರಗಳ 64 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ದಾಖಲಾಗಿರುವ ಮತಯಂತ್ರಗಳ ಸಂಗ್ರಹದ ಬಗ್ಗೆ ರವಿವಾರ ಕೆಲ ಅಭ್ಯರ್ಥಿಗಳು ಎಸ್‍ಟಿಜೆ ಕಾಲೇಜು ಆವರಣಕ್ಕೆ ಬಂದು ಪರಿಶೀಲಿಸಿದರು. ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎಚ್.ಹರೀಶ್, ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ತಮ್ಮ ಬೆಂಬಲಿಗರೊಂದಿಗೆ ರವಿವಾರ ಬೆಳಗ್ಗೆ ಕಾಲೇಜು ಆವರಣಕ್ಕೆ ಆಗಮಿಸಿ ಮತಯಂತ್ರಗಳನ್ನಿಡಲಾಗಿರುವ ಸ್ಟ್ರಾಂಗ್ ರೂಮ್ ಸೇರಿದಂತೆ ಮತ ಎಣಿಕೆಗೆ ಕೈಗೊಳ್ಳಲಾಗಿರುವ ಸಿದ್ಧತೆಗಳ ಬಗ್ಗೆ ಪರಿಶೀಲಿಸಿ ಚುನಾವಣಾಧಿಕಾರಿಗಳೊಂದಿಗೆ ಕೆಲಹೊತ್ತು ಮಾತುಕತೆ ನಡೆಸಿ ತೆರಳಿದ್ದಾರೆ.

ಒಟ್ಟಿನಲ್ಲಿ ರಾಜ್ಯ ವಿಧಾನಸಭೆಗೆ ಜಿಲ್ಲೆಯ ಚಿಕ್ಕಮಗಳೂರು, ಶೃಂಗೇರಿ, ಕಡೂರು, ತರೀಕೆರೆ, ಮೂಡಿಗೆರೆ ವಿಧಾನಸಭೆ ಕ್ಷೇತ್ರಗಳಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು ಯಾರು ಎಂಬ ಭವಿಷ್ಯ ಎಸ್‍ಟಿಜೆ ಕಾಲೇಜಿನ ಸ್ಟ್ರಾಂಗ್ ರೂಮ್‍ನಲ್ಲಿ ಭದ್ರವಾಗಿದ್ದು, ಮಂಗಳವಾರ ಮಧ್ಯಾಹ್ನದ ವೇಳೆಗೆ ಈ ಕುತೂಹಲಕ್ಕೆ ಅಧಿಕಾರಿಗಳು ತೆರೆ ಎಳೆಯಲಿದ್ದಾರೆ. ಇದಕ್ಕಾಗಿ ಜಿಲ್ಲೆಯ ಐದೂ ಕ್ಷೇತ್ರಗಳ ಜನತೆ ಕತೂಹಲದಿಂದ ಲೆಕ್ಕಾಚಾರ ಹಾಕುತ್ತಲೇ ಕಾಯುವುದು ಅನಿವಾರ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News