ಧರ್ಮಾಚರಣೆಯಿಂದ ಮಾತ್ರ ಶಾಂತಿ ಸಮೃದ್ಧಿ: ಸ್ವಯಂಪ್ರಕಾಶ ಸ್ವಾಮೀಜಿ
ಚಿಕ್ಕಮಗಳೂರು, ಮೇ 13: ಎಲ್ಲಿಯವರೆಗೆ ಮನುಷ್ಯರು ತಮ್ಮ ನಿಜ ಸ್ವರೂಪವನ್ನು ಅರಿಯುವುದಿಲ್ಲವೋ ಅಲ್ಲಿಯವರೆಗೂ ಅವರಿಗೆ ನಿಜವಾದ ಆನಂದ ಲಭಿಸುವುದಿಲ್ಲ ಎಂದು ಹರಿಹರಪುರ ಮಠಾಧೀಶ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ತಾಲೂಕಿನ ಕೂದುವಳ್ಳಿಯಲ್ಲಿ ಪುನರ್ ನಿರ್ಮಾಣಗೊಂಡಿರುವ ಪುರಾತನ ಶ್ರೀ ಮಹಾಲಕ್ಷೀ ದೇವಾಲಯದಲ್ಲಿ ರವಿವಾರ ಮಹಾಕುಂಭಾಭಿಷೇಕವನ್ನು ನೆರವೇರಿಸಿ ನಂತರ ನಡೆದ ಧಾರ್ಮಿಕ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ನಮ್ಮ ಪೂರ್ವಜರಲ್ಲಿ ಪಾರಮಾರ್ಥಿಕ ಚಿಂತನೆ ಇತ್ತು, ಅವರು ಧರ್ಮಾಚರಣೆ ಮಾಡುತ್ತಿದ್ದರು, ಅದರಿಂದಾಗಿ ಅವರಲ್ಲಿ ಸಹಜ ಸಿದ್ದವಾದ ಶಾಂತಿ, ನೆಮ್ಮದಿ, ಇತ್ತು. ಆದರೆ ಇಂದಿನ ಪೀಳಿಗೆ ಪರಮಾರ್ಥವನ್ನು ಬಿಟ್ಟು ವಿಷಯಾಧಾರಿತ ಸುಖಗಳತ್ತ ಓಡುತ್ತಿದೆ. ಹಣ, ಅಧಿಕಾರ. ಅಂತಸ್ತು, ಸೇರಿದಂತೆ ಐಹಿಕ ಸುಖ ಭೋಗಗಳನ್ನು ಅರಸುತ್ತಿದೆ. ಹಾಗಾಗಿ ಮಾನಸಿಕ ಶಾಂತಿ ಮತ್ತು ನೆಮ್ಮದಿಯನ್ನು ಇಂದಿನ ಪೀಳಿಗೆ ಕಳೆದುಕೊಂಡಿದೆ ಎಂದು ವಿಷಾದಿಸಿದರು.
ನಾವು ದೇಹವನ್ನು ತ್ಯಜಿಸಿದ ನಂತರ ನಾವು ಗಳಿಸಿದಹಣ, ಅಧಿಕಾರ, ಅಂತಸ್ತು, ಕೀರ್ತಿ, ಹೆಂಡತಿ, ಮಕ್ಕಳು, ಬಂಧು ಬಳಗ ಇವು ಯಾವುದೂ ನಮ್ಮೊಂದಿಗೆ ಬರುವುದಿಲ್ಲ. ನಾವು ಸಂಪಾದಿಸಿದ ಪಾಪ, ಪುಣ್ಯ ಮಾತ್ರ ನಮ್ಮ ಜೊತೆಗೆ ಬರುತ್ತದೆ ಎಂದ ಅವರು, ಎಲ್ಲರೂ ಈ ಸತ್ಯವನ್ನು ಅರಿಯಬೇಕು ನ್ಯಾಯ ಮಾರ್ಗದಲ್ಲಿ ನಡೆಯಬೇಕು. ಧರ್ಮಾಚರಣೆ ಮಾಡಬೇಕು. ಹೃದಯ ಶುದ್ದಿಯನ್ನು ಹೊಂದಿರಬೇಕು ಎಂದು ಕಿವಿ ಮಾತು ಹೇಳಿದರು.
ಬದುಕಿಗೆ ಹಣ ಅಗತ್ಯ, ಆದರೆ ಅದೇ ಎಲ್ಲವೂ ಅಲ್ಲ, ಹಣಕ್ಕಾಗಿ ವಾಮ ಮಾರ್ಗ ತುಳಿಯಬಾರದು ಪ್ರಾಮಾಣಿಕತೆಯಿಂದ ಹಣವನ್ನು ಸಂಪಾದಿಸಬೇಕು. ಭಗವಂತ ನಿಮ್ಮ ಜಾತಿ,ಅಧಿಕಾರ, ಅಂತಸ್ತು, ಮತ್ತು ವಿದ್ಯೆಯನ್ನು ನೋಡುವುದಿಲ್ಲ. ನಿಮ್ಮ ಹೃದಯ ಶುದ್ದಿ, ಭಕ್ತಿ ಮತ್ತು ಶ್ರಧ್ದೆಯನ್ನು ನೋಡಿ ಅನುಗ್ರಹಿಸುತ್ತಾನೆ ಎಂದು ತಿಳಿಸಿದರು.
ದೇವಾಲಯದ ನಿಮಾರ್ಣಕ್ಕೆ ಸಹಕರಿಸಿದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಇದೇ ವೇಳೆ ಶ್ರೀಗಳು ನೂತನವಾಗಿ ಪ್ರತಿಷ್ಠಾಪನೆಗೊಂಡ ಶ್ರೀಮಹಾಲಕ್ಷ್ಮೀ ವಿಗ್ರಹಕ್ಕೆ ಅಭಿಷೇಕ, ವಿಶೇಷ ಪೂಜೆ ನೆರವೆರಿಸಿದರು. ಪ್ರತಿಷ್ಠಾಪನೆ ಅಂಗವಾಗಿ ಹೋಮ, ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಸಮಾರಂಭಕ್ಕೆ ಮುನ್ನ ಗ್ರಾಮಕ್ಕೆ ಆಗಮಿಸಿದ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಪಾದಪೂಜೆ ನೆರವೆರಿಸಲಾಯಿತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು.