ನನ್ನನ್ನು ಸೋಲಿಸಲು ಮತಯಂತ್ರ ಅದಲು-ಬದಲು: ಜಗದೀಶ್ ಶೆಟ್ಟರ್ ಆರೋಪ
Update: 2018-05-13 20:07 IST
ಹುಬ್ಬಳ್ಳಿ, ಮೇ 13: ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು ಕೆಲ ಅಧಿಕಾರಿಗಳೂ ವಾಮಮಾರ್ಗ ಅನುಸರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿಯಿಂದ ಸಾವಿರಾರು ಜನರ ಹೆಸರು ಉದ್ದೇಶಪೂರ್ವಕವಾಗಿಯೇ ಕೈ ಬಿಡಲಾಗಿದೆ. ಅಲ್ಲದೆ, ನನ್ನ ಕ್ಷೇತ್ರದಲ್ಲಿ ಗೋಲ್‌ಮಾಲ್ ನಡೆದಿದೆ ಎಂದು ದೂರಿದರು.
ಕ್ಷೇತ್ರದ ಅನೇಕ ಕಡೆ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ಅದಲು-ಬದಲು ಮಾಡಿದ್ದಾರೆ. ಏನೇ ಆದರೂ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿ ಅಧಿಕಾರ ಹಿಡಿಯಲಿದ್ದು, ಬಿಎಸ್‌ವೈ ಮತ್ತೊಮ್ಮೆ ಸಿಎಂ ಆಗಲಿದ್ದಾರೆಂದು ಹೇಳಿದರು.