ಎರಡು ಕ್ಷೇತ್ರಗಳ 3 ಮತಗಟ್ಟೆಗಳಲ್ಲಿ ನಾಳೆ ಮರು ಮತದಾನ

Update: 2018-05-13 14:50 GMT

ಬೆಂಗಳೂರು, ಮೇ 13: ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲನಹಳ್ಳಿ ಮತಗಟ್ಟೆ ಹಾಗೂ ಕುಷ್ಟಗಿ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಮೇ 14ರ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮರು ಮತದಾನ ನಡೆಯಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ರವಿವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಲೊಟ್ಟೆಗೊಲ್ಲನಹಳ್ಳಿ ಮತಗಟ್ಟೆಯೊಂದರಲ್ಲಿ ವಿವಿ ಪ್ಯಾಟ್ ಸಮಸ್ಯೆಯಿಂದಾಗಿ ಮರುಮತದಾನವಾಗುತ್ತಿದ್ದರೆ, ಕುಷ್ಟಗಿ ಕ್ಷೇತ್ರದ 20 ಹಾಗೂ 21ನೆ ಮತಗಟ್ಟೆಗಳಲ್ಲಿ ಮತಗಳು ಅದಲು-ಬದಲಾಗಿದ್ದರಿಂದ ಮರು ಮತದಾನಕ್ಕೆ ಆದೇಶಿಸಲಾಗಿದೆ ಎಂದು ತಿಳಿಸಿದರು.

ಲೊಟ್ಟೆಗೊಲ್ಲನಹಳ್ಳಿಯಲ್ಲಿ 1,444 ಮತದಾರರಿದ್ದಾರೆ. ಅದರಲ್ಲಿ 740 ಪುರುಷರು, 704 ಮಹಿಳಾ ಮತದಾರರಿದ್ದಾರೆ. ಹಾಗೆಯೆ ಕುಷ್ಟಗಿ ಕ್ಷೇತ್ರದ 20ನೆ ಮತಗಟ್ಟೆಯಲ್ಲಿ 799 ಹಾಗೂ 21ಮತಗಟ್ಟೆಯಲ್ಲಿ 884 ಮತದಾರರಿದ್ದಾರೆ. ಈ ಮತಗಟ್ಟೆಯಲ್ಲಿ ಬರುವ ಎಲ್ಲ ಮತದಾರರು ತಪ್ಪದೆ ಮತದಾನ ಮಾಡಬೇಕು ಎಂದು ಅವರು ಮನವಿ ಮಾಡಿದರು.

-ಮರು ಮತದಾನ ಆಗುತ್ತಿರುವ ಮೂರು ಮತಗಟ್ಟೆಗಳಲ್ಲಿರುವ ಮತದಾರರಿಗೆ ವಿಶೇಷ ವೇತನ ಸಹಿತ ರಜೆಗೆ ಆದೇಶಿಸಲಾಗಿದೆ.
-ಎಡಗೈನ ಮಧ್ಯ ಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುತ್ತದೆ.
-ಮರು ಮತದಾನ ಕುರಿತಂತೆ ಈಗಾಗಲೆ ಮತಗಟ್ಟೆ ವ್ಯಾಪ್ತಿಯಲ್ಲಿ ಡಂಗೂರ ಬಾರಿಸಲಾಗಿದೆ ಹಾಗೂ ಮನೆ-ಮನೆಗೆ ಹೋಗಿ ಮತದಾರರಿಗೆ ಈ ಬಗ್ಗೆ ಅರಿವು ಮೂಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News