ಚಿಕ್ಕಮಗಳೂರು: ಮೇ.15 ರಂದು ಮತ ಎಣಿಕೆ; 5 ಕ್ಷೇತ್ರಗಳ ಅಭ್ಯರ್ಥಿಗಳು, ಕಾರ್ಯಕರ್ತರಲ್ಲಿ ಕುತೂಹಲ

Update: 2018-05-13 16:10 GMT

ಚಿಕ್ಕಮಗಳೂರು, ಮೇ 13:  ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೇ.12ರಂದು ಶನಿವಾರ ಜಿಲ್ಲೆಯ ಮತದಾರರು ಬರೆದ 64 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ  ಭದ್ರವಾಗಿದ್ದು, ಮೇ 15ರ ಫಲಿತಾಂಶ ಬಗ್ಗೆ ಜಾತಕ ಪಕ್ಷಿಗಳಂತೆ ನಿದ್ದೆ ಬಿಟ್ಟು ಕಾಯುತ್ತಿರುವ ಅಭ್ಯರ್ಥಿಗಳು ಹಾಗೂ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಶಾಸಕ ಸ್ಥಾನದ ಜವಾಬ್ದಾರಿಯ ಮುದ್ರೆಯನ್ನು ಮತದಾರರು ಯಾರಿಗೆ ಒತ್ತಿದ್ದಾರೆಂಬ ಬಗ್ಗೆ ಕುತೂಹಲ ಶುರುವಾಗಿದೆ.

ಮೇ 15ರಂದು ಫಲಿತಾಂಶ ಹೊರಬೀಳಲಿದ್ದು, ಯಾರು ಗೆಲುವು ಸಾಧಿಸಲಿದ್ದಾರೆ ಎಂಬ ಲೆಕ್ಕಾಚಾರ ಪಕ್ಷದ ಕಾರ್ಯಕರ್ತರು ಹಾಗೂ ನಾಗರಿಕರಲ್ಲಿ ತೀವ್ರ ಕೂತುಹಲ ಹೆಚ್ಚಿಸಿದೆ. ಮತಗಟ್ಟೆವಾರು, ಜಾತಿವಾರು, ಲೆಕ್ಕಚಾರದ ಸಮೀಕರಣದ ಮೇಲೆ ಇಂತವರೇ ಗೆಲುವು ಸಾಧಿಸಬಹುದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಬಹುದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಅನೇಕ ದಿನಗಳಿಂದ ಪ್ರಚಾರ, ಸಭೆ, ಸಮಾರಂಭದಲ್ಲಿ ಮಗ್ನರಾಗಿದ್ದ ಅಭ್ಯರ್ಥಿಗಳು, ಪಕ್ಷದ ಕಾರ್ಯಕರ್ತರು ಶನಿವಾರದ ಮತದಾನ ಪ್ರಕ್ರಿಯೆ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ. ರವಿವಾರ ಬೆಳಗಿನಿಂದ ಗೆಲುವು ಸೋಲಿನ ಲೆಕ್ಕಚಾರ ಹಾಕುತ್ತಿರುವ ವಿವಿಧ ಪಕ್ಷಗಳ ಕಾರ್ಯಕರ್ತರು, ಅಭ್ಯರ್ಥಿಗಳಲ್ಲಿ ಈಗಾಗಲೇ ಕುತೂಹಲ ಶುರುವಾಗಿದೆ.

ಜಿಲ್ಲೆಯ ಐದೂ ಕ್ಷೇತ್ರಗಳ ಪೈಕಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಸಿಟಿ ರವಿ, ಕಾಂಗ್ರೆಸ್‍ನ ಬಿ.ಎಲ್.ಶಂಕರ್ ನಡುವೆ ತೀವ್ರ ಹಣಾಹಣಿ ನಡೆಯಲಿದೆ. ನೆಕ್ ಟು ನೆಕ್ ಫೈಟ್ ಎಂಬ ಮಾತುಗಳು ಚುನಾವಣೆಗೂ ಮುನ್ನ ಕೇಳಿ ಬರುತ್ತಿತ್ತು. ಆದರೆ ಚುನಾವಣೆ ಬಳಿಕ ರವಿವಾರ ಎಲ್ಲರ ಬಾಯಲ್ಲೂ ಮೂರು ಪಕ್ಷಗಳ ನಡುವೆ ಪೈಟ್ ಏರ್ಪಟ್ಟಿದೆ. ಜೆಡಿಎಸ್ ಅಭ್ಯರ್ಥಿ ನಿರೀಕ್ಷೆಗೂ ಮೀರಿ ಮತ ಪಡೆದಿದ್ದಾರೆ. ಈ ಕಾರಣಕ್ಕೆ ಜೆಡಿಎಸ್ ಅಭ್ಯರ್ಥಿ ಇಲ್ಲವೇ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಒಬ್ಬರು ಮತಗಳ ಹಂಚಿಕೆ, ಧ್ರುವೀಕರಣ, ಜಾತಿವಾರ ಆಧಾರದ ಮೇಲೆ ಗೆಲ್ಲಲ್ಲಿದ್ದಾರೆ. ಸಿ.ಟಿ.ರವಿ ಶತಾಯಗತಾಯ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮೇ.15ರಂದು ಜಿಲ್ಲೆಯ ಐದು ಕ್ಷೇತ್ರದ ಫಲಿತಾಂಶ ಹೊರಬೀಳಲಿದ್ದು, ಮತದಾರರು ವಿಜಯಮಾಲೆ ಯಾರ ಕೊರಳಿಗೆ ತೊಡಿಸಿದ್ದಾರೆ ಎಂಬುದು ತಿಳಿಯಲಿದೆ. ಅಭ್ಯರ್ಥಿಗಳು ಚುನಾವಣೆ ಕಾವಿನಿಂದ ಹೊರ ಬಂದರೂ ಗೆಲುವಿನ ಲೆಕ್ಕಚಾರ ಎದೆಯೊಳಗೆ ಹೃದಯ ಬಡಿತ ಹೆಚ್ಚಿಸಿರುವುದಂತು ಸತ್ಯ.

ಗೆಲ್ಲುವ ಕುದುರೆ ಮೇಲೆ ಬೆಟ್ಟಿಂಗ್:  
ಯಾರು ಗೆಲ್ಲುತ್ತಾರೆಂಬ ಕುತೂಹಲ ಸಾರ್ವಜನಿಕರದ್ದಾಗಿದ್ದರೆ, ಇನ್ನು ಕೆಲವರು ಗೆಲ್ಲುವ ಕುದುರೆಗಳ ಮೇಲೆ ದುಡ್ಡು ಕಟ್ಟಿ ಹಣ ಮಾಡಲು ಮುಂದಾಗಿದ್ದಾರೆಂಬ ಮಾತುಗಳೂ ಜಿಲ್ಲೆಯಾದ್ಯಂತ ಕೇಳಿ ಬರುತ್ತಿದೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಮುಖ್ಯವಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಮೇಲೆ ಹಣ ಸುರಿಯಲಾಗುತ್ತಿದೆ ಎನ್ನಲಾಗಿದೆ. ಪಕ್ಷೇತರ, ಸ್ವತಂತ್ರವಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಬಗ್ಗೆ ಯಾರೂ ಮತನಾಡುತ್ತಿಲ್ಲ. ವಿವಿಧ ಅಂಶಗಳ ಆಧಾರದ ಮೇಲೆ ಅಳೆದು ತೂಗಿ ಇಂತಹ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾರೆಂದು ಲೆಕ್ಕಾಚಾರ ಹಾಕಿರುವ ಕೆಲವರು ಗೆಲ್ಲುವ ಅಭ್ಯರ್ಥಿಗಳ ಮೇಲೆ ಲಕ್ಷ, ಲಕ್ಷ ಬೆಟ್ಟಿಂಗ್ ಕಟ್ಟಿದ್ದಾರೆನ್ನಲಾಗಿದೆ. ಚಿಕ್ಕಮಗಳೂರು ನಗರದಲ್ಲಿ ಸಿಟಿ ರವಿ ಹಾಗೂ ಬಿ.ಎಲ್.ಶಂಕರ್  ಅವರೇ ಗೆಲ್ಲುತ್ತಾರೆಂಬ ಭರವಸೆ ಹೊಂದಿರುವವರು ಬೆಟ್ಟಿಂಗ್ ಕಟ್ಟಿ ಹಣ ಮಾಡುವ ದಂಧೆಗೂ ಇಳಿದಿದ್ದಾರೆಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಜಾತಿವಾರು, ಮತಗಟ್ಟೆವಾರು, ಲೆಕ್ಕಚಾರ ಹಾಕುತ್ತಿರುವ ಬೆಟ್ಟಿಂಗ್‍ಕೋರರು ಗೆಲ್ಲುವ ಕುದುರೆ ಮೇಲೆ ಲಕ್ಷಗಟ್ಟಲೇ ಹಣ ಪಣಕ್ಕಿಡುತ್ತಿದ್ದಾರೆನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News