ತುಮಕೂರು: ಮತ ಎಣಿಕೆಗೆ ಸಕಲ ಸಿದ್ದತೆ; 2500 ಸಿಬ್ಬಂದಿ ನೇಮಕ
ತುಮಕೂರು.ಮೇ.13:ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಮತದಾನ ಮುಕ್ತಾಯವಾಗಿದ್ದು, ಮತ ಯಂತ್ರಗಳನ್ನು ಉಪವಿಭಾಗವಾರು ಸರಕಾರಿ ಪಾಲಿಟೆಕ್ನಿಕ್, ತುಮಕೂರು ವಿವಿ ವಿಜ್ಞಾನ ಮತ್ತು ಕಲಾ ಕಾಲೇಜಿನಲ್ಲಿ ಭದ್ರತಾ ಕೊಠಡಿಗಳನ್ನು ನಿರ್ಮಿಸಿ, ಅರೆ ಸೇನಾ ಪಡೆಯು ಬಿಗಿಬಂದೋಬಸ್ತಿನಲ್ಲಿ ಇರಿಸಲಾಗಿದೆ.
ಮತ ಎಣಿಕೆಗೆ ಸಕಲ ಸಿದ್ದತೆ: ಮಧುಗಿರಿ ಉಪವಿಭಾಗದ ಮಧುಗಿರಿ, ಪಾವಗಡ, ಶಿರಾ ಮತ್ತು ಕೊರಟಗೆರೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದರೆ, ತಿಪಟೂರು ಉಪವಿಭಾಗದ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆ ತುಮಕೂರು ವಿವಿ ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ. ತುಮಕೂರು ಉಪವಿಭಾಗದ ಕುಣಿಗಲ್, ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ತುಮಕೂರು ವಿವಿಯ ಕಲಾ ಕಾಲೇಜಿನಲ್ಲಿ ನಡೆಯಲಿದೆ.
ಮತ ಎಣಿಕೆಗೆ 2500 ಸಿಬ್ಬಂದಿ: ಮತ ಎಣಿಕೆಗೆ ಜಿಲ್ಲಾಡಳಿತ 2500 ಸಿಬ್ಬಂದಿ ನೇಮಕ ಮಾಡಿದ್ದು, ಇವರಿಗೆ ಈಗಾಗಲೇ ಹಲವು ಹಂತದ ತರಬೇತಿ ನೀಡಲಾಗಿದೆ. ಮತ ಎಣಿಕೆ ಕೇಂದ್ರದೊಳಗೆ ಬರುವ ವಿವಿಧ ಪಕ್ಷಗಳ ಅಭ್ಯರ್ಥಿಗಳ ಎಜೆಂಟ್‍ಗಳಿಗೆ ಪಾಸ್ ಪಡೆದುಕೊಳ್ಳಲು ಈಗಾಗಲೇ ಸೂಚನೆ ನೀಡಿದ್ದು, ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಮತ್ತು ಇನ್ನಿತರ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ.
ಮತ ಎಣಿಕೆಯನ್ನು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಎಲ್ಲಾ ಮತ ಎಣಿಕೆ ಕೇಂದ್ರಗಳಿಗೆ ಸಿಸಿ ಟಿ.ವಿ ಅಳವಡಿಸಲಾಗಿದೆ. ಮೊದಲು ಅಂಚೆ ಮತಗಳ ಎಣಿಕೆ ನಂತರ, ವಿದ್ಯುತ್ಮಾನ ಮತ ಯಂತ್ರಗಳ ಮತ ಎಣಿಕೆ ಆರಂಭವಾಗಲಿದೆ. ಭದ್ರತೆಗಾಗಿ ಅರೆ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿಶಾಲ್ ಆರ್. ತಿಳಿಸಿದ್ದಾರೆ.