×
Ad

ಹಾಸನ: ಮತ ಎಣಿಕೆ ಕೇಂದ್ರಗಳು ಸಜ್ಜು; ಜಿಲ್ಲಾಧಿಕಾರಿಯಿಂದ ಪರಿಶೀಲನೆ

Update: 2018-05-13 22:02 IST

ಹಾಸನ,ಮೇ.13: 2018ರ ವಿಧಾನಸಭಾ ಚುನಾವಣೆ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆದಿದ್ದು, ಶೇಕಡ 81.47 ರಷ್ಟು ಮತದಾನ ಆಗಿದೆ ಎಂದು ಜಿಲ್ಲಾಧಿಕಾರಿ ಜಾಫರ್ ತಿಳಿಸಿದರು.

ನಗರದ ಡೈರಿ ವೃತ್ತದ ಬಳಿ ಇರುವ ಸರಕಾರಿ ಇಂಜಿನಿಯರ್ ಕಾಲೇಜಿನ ಮತ ಏಣಿಕೆ ಕೇಂದ್ರವನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯ 7 ಕ್ಷೇತ್ರದ ಮತದಾನ ನಡೆದು ಮತಯಂತ್ರವನ್ನು ಪೊಲೀಸ್ ಸಿಬ್ಬಂದಿಯೊಂದಿಗೆ ಸುರಕ್ಷಿತವಾಗಿ ತಂದು ಭದ್ರತಾ ಕೊಠಡಿಯಲ್ಲಿ ಇಡಲಾಗಿದೆ. ಎಲ್ಲಾ ಮತಯಂತ್ರವನ್ನು ಸೀಲ್ ಮಾಡಲಾಗಿದೆ. ಮೇ.15ರ ಬೆಳಿಗ್ಗೆ 8 ಗಂಟೆಗೆ ಭದ್ರತಾ ಕೊಠಡಿಯಿಂದ ಮತಯಂತ್ರ ತೆರೆದು ಏಣಿಕೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದರು.

ಒಂದು ಟೇಬಲ್‍ನಲ್ಲಿ ಮೂರು ಜನರು ಇದ್ದು, ಪಕ್ಷದ ಅಭ್ಯರ್ಥಿ ಇಲ್ಲವೇ ಯಾರಾದರು ಒಬ್ಬರು ಇರಲು ಅವಕಾಶ ಕೊಡಲಾಗುತ್ತದೆ. ಒಂದು ಸುತ್ತು ಮತ ಏಣಿಕೆ ಮುಗಿದ ಮೇಲೆ ಪರಿಶೀಲಿಸಿದ ಬಳಿಕ ಫಲಿತಾಂಶ ತಿಳಿಸಲಾಗುವುದು ಎಂದು ಹೇಳಿದರು. ವಿವಿ ಪ್ಯಾಕ್ ಸ್ಲಿಪ್ ಅನ್ನು ವಿಶೇಷ ಸ್ಥಳದಲ್ಲಿ ಏಣಿಕೆ ಮಾಡಲು ಸಿದ್ಧತೆ ಆಗಿದೆ. ಮತ ಏಣಿಕೆ ವೇಳೆ ಕೌಂಟಿಂಗ್ ಸಿಬ್ಬಂದಿ ಮತ್ತು ಸಹಾಯಕರು ಸೇರಿ ಒಟ್ಟು 500 ಮಂದಿ ಇರುತ್ತಾರೆ. ಪ್ರತಿ ವಾರ್ಡ್‍ನಲ್ಲೂ ಸಿಸಿ ಟಿವಿ ಅಳವಡಿಸಲಾಗಿದೆ. ಮೇ.15ರ ಮಂಗಳವಾರ ಮದ್ಯಾಹ್ನದ ವೇಳೆಗೆ ವಿಧಾನಸಭಾ ಚುನಾವಣೆಯ ಹಾಸನ ಜಿಲ್ಲೆಯ ಅಭ್ಯರ್ಥಿಗಳ ಪೂರ್ಣ ಚಿತ್ರಣ ಹೊರ ಬೀಳಲಿದೆ ಎಂದು ಜಿಲ್ಲಾಧಿಕಾರಿಯವರು ಮಾಹಿತಿ ಕೊಟ್ಟರು.

ಈ ಸಮಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಸೇರಿದಂತೆ ಇತರರು ಮತ ಏಣಿಕೆ ಕೇಂದ್ರದಲ್ಲಿ ಇದ್ದು, ಪರಿಶೀಲನೆ ನಡೆಸಲಾಯಿತು.

7 ಕ್ಷೇತ್ರದ ಮತ ಪೆಟ್ಟಿಗೆಗೆ ವಿಶೇಷ ಭದ್ರತೆ
ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಒಳಗಿನ ಕೊಠಡಿಗಳಲ್ಲಿ ಇಡಲಾಗಿರುವ 7 ಕ್ಷೇತ್ರದ ಮತ ಪೆಟ್ಟಿಗೆ ರೂಂ ಸುತ್ತಮುತ್ತ ವಿಶೇಷ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. 7 ಕ್ಷೇತ್ರದ ಮತ ಏಣಿಕೆಗೆ ಆಯಾ ಕ್ಷೇತ್ರಕ್ಕೆ ಪ್ರತ್ಯೇಕ ರೂಂ ಮಾಡಲಾಗಿದೆ. ಮತ ಏಣಿಕೆಯ ವೇಳೆ ಅಧಿಕಾರಿಗಳಿಗೆ ಯಾವುದೇ ತೊಂದರೆ ಆಗದಂತೆ ಎಲ್ಲಾ ಸಿದ್ಧತೆಗಳು ನಡೆಸಿದ್ದು, ಕಾಲೇಜಿನ ಆವರಣದ ಒಳಗೆ ನಿಗದಿಪಡಿಸಿದವರು ಬಿಟ್ಟು ಬೇರೆ ಯಾರೂ ಒಳ ಬಾರದಂತೆ ತಡೆಗಳನ್ನು ಮಾಡಲಾಗಿದೆ. ಜನರಿಗೆ ಮತ ಏಣಿಕೆ ವೇಳೆ ಫಲಿತಾಂಶವನ್ನು ತಿಳಿಸಲು ದ್ವನಿವರ್ಧಕವನ್ನು ಕಾಲೇಜಿನ ಸುತ್ತಮುತ್ತ ಅಳವಡಿಸಲಾಗಿದೆ. 

ಸಿಸಿ ಕ್ಯಾಮರ ಅಳವಡಿಕೆ: ಮತ ಏಣಿಕೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಕಾಲೇಜಿನ ಸುತ್ತ ಸಿಸಿ ಕ್ಯಾಮಾರ ಅಳವಡಿಸಲಾಗಿದೆ. ಸಿಸಿ ಕ್ಯಾಮಾರದ ವಿಡಿಯೋ ವೀಕ್ಷಣೆಯನ್ನು ವೀಕ್ಷಿಸಲು ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಲಾಗಿದೆ. 

ಭದ್ರತೆ: ಮತ ಏಣಿಕೆ ಮಾಡುವ ಕಾಲೇಜಿನ ಮುಖ್ಯ ದ್ವಾರದಲ್ಲಿ ಶಸ್ತ್ರಸಜ್ಜಿತ ಭದ್ರತೆಯನ್ನು ಮಾಡಲಾಗಿದೆ. ಕಾಲೇಜಿನ ಆವರಣದ ಸುತ್ತ ವಿಶೇಷ ಗಮನ ಇಡಲಾಗಿದೆ. ಒಟ್ಟಾರೆ ಮತ ಏಣಿಕೆ ಸಮಯದಲ್ಲಿ ಯಾವುದೇ ಗೊಂದಲ ಬಾರದಂತೆ ಪ್ರತಿ ಹಂತದಲ್ಲೂ ವಿಶೇಷ ಗಮನ ನೀಡಿ ನಿಗವಹಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News